kittur vijay news.ಅಂಬಡಗಟ್ಟಿ ಮದ್ಯದಂಗಡಿ ತೆರವಿಗೆ ಆಗ್ರಹ: ಶ್ರೀಗಳ ನೇತೃತ್ವದಲ್ಲಿ ಗ್ರಾಮಸ್ಥರಿಂದ ಅಹೋರಾತ್ರಿ ಧರಣಿ.

ಅಂಬಡಗಟ್ಟಿ ಮದ್ಯದಂಗಡಿ ತೆರವಿಗೆ ಆಗ್ರಹ: ಶ್ರೀಗಳ ನೇತೃತ್ವದಲ್ಲಿ ಗ್ರಾಮಸ್ಥರಿಂದ ಅಹೋರಾತ್ರಿ ಧರಣಿ

ಚ ​ಕಿತ್ತೂರು: ಸಮೀಪದ ಅಂಬಡಗಟ್ಟಿ ಗ್ರಾಮದ ಸಮೀಪವಿರುವ ಎಂ.ಎಸ್.ಐ.ಎಲ್. ಮದ್ಯದ ಅಂಗಡಿಯನ್ನು ಕೂಡಲೇ ಬಂದ್ ಮಾಡಬೇಕು ಅಥವಾ ಬೇರೆಡೆಗೆ ಸ್ಥಳಾಂತರಗೊಳಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಹಾಗೂ ಮಡಿವಾಳೇಶ್ವರ ಮಠದ ಶ್ರೀ ವೀರೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

​ಗ್ರಾಮದ ಶಾಂತಿ ಮತ್ತು ಮಹಿಳೆಯರ ಸುರಕ್ಷತೆಗೆ ಧಕ್ಕೆ ತರುತ್ತಿರುವುದಲ್ಲದೇ ಯುವಕರ ಬದುಕು ಹಾಳುಮಾಡುತ್ತಿರುವ ಈ ಮದ್ಯದಂಗಡಿಯನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಈ ಹಿಂದೆಯೇ ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದರು. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಏಪ್ರಿಲ್ 22 ರವರೆಗೆ ಅಂತಿಮ ಗಡುವು ನೀಡಲಾಗಿತ್ತು. ಆದರೆ, ಅಧಿಕಾರಿಗಳು ಗ್ರಾಮಸ್ಥರ ಬೇಡಿಕೆಗೆ ಮನ್ನಣೆ ನೀಡದ ಹಿನ್ನೆಲೆಯಲ್ಲಿ ಮತ್ತು ನೀಡಿದ ಗಡುವು ಮುಗಿದರೂ ಯಾವುದೇ ಕ್ರಮ ಜರುಗಿಸದ ಕಾರಣ, ಇಂದು ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ​ಮಡಿವಾಳೇಶ್ವರ ಮಠದ ವೀರೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯ ಮಹಿಳೆಯರು, ಹಿರಿಯರು ಹಾಗೂ ಯುವಕರು ಭಾಗವಹಿಸಿದ್ದರು. ಮದ್ಯದಂಗಡಿಯ ಮುಂದೆ ಧರಣಿ ಕುಳಿತ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
​ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಅಂಗಡಿ ಬಂದ್ ಮಾಡುವವರೆಗೆ ಧರಣಿ ಮುಂದುವರಿಯಲಿದೆ ಎಂದು ಅವರು ತಿಳಿಸಿದರು.

​ಗ್ರಾಮದ ತಾಯಿ-ಮಕ್ಕಳು ಮರಿಗಳೊಂದಿಗೆ ರಸ್ತೆಯಲ್ಲೇ ಕುಳಿತು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮದ್ಯದಂಗಡಿ ಸ್ಥಳಾಂತರವಾಗುವವರೆಗೂ ಹೋರಾಟದ ಹಾದಿಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ

Post a Comment

0 Comments