(ರಾಜಶೇಖರ, ಬ,ಕೋಟಿ.ಕಿತ್ತೂರು)
ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಕೆಲವು ನಾಯಕರು ಕೇವಲ ಅಧಿಕಾರಕ್ಕಾಗಿ ಬಂದು ಹೋಗುತ್ತಾರೆ, ಇನ್ನು ಕೆಲವರು ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರನ್ನು ಶಾಶ್ವತವಾಗಿ ಕೆತ್ತಿ ಹೋಗುತ್ತಾರೆ. ಅಂತಹ ಅಪರೂಪದ, ಜನಸಾಮಾನ್ಯರ ಎದೆಯಾಳದ ನಾಯಕ ಸಿದ್ದರಾಮಯ್ಯ, "ಬಡವರ ಬಂಧು", "ಸ್ತ್ರೀಯರ ಅಣ್ಣ", "ಅಹಿಂದ ವರ್ಗಗಳ ಆಶಾಕಿರಣ" ಎಂದೇ ಪ್ರಸಿದ್ಧರು. ಸಿದ್ದರಾಮಯ್ಯನವರ ರಾಜಕೀಯ ಪಯಣ ಕೇವಲ ಒಂದು ಅಧಿಕಾರಾವಧಿಯಲ್ಲ, ಅದೊಂದು ಸುದೀರ್ಘ ಸಾಮಾಜಿಕ ಕ್ರಾಂತಿಯ ಯುಗ.
ಬಡವರ ಬಂಧು: ಹಸಿವು ಮುಕ್ತ ಕರ್ನಾಟಕದ ಹರಿಕಾರ.
ಸಿದ್ದರಾಮಯ್ಯ ಎಂದರೆ ಮೊದಲು ನೆನಪಿಗೆ ಬರುವುದು 'ಅನ್ನಭಾಗ್ಯ' ಯೋಜನೆ. "ರಾಜ್ಯದಲ್ಲಿ ಯಾರೂ ಹಸಿವಿನಿಂದ ಮಲಗಬಾರದು" ಎಂಬ ಕಳಕಳಿಯಿಂದ ಜಾರಿಗೆ ತಂದ ಈ ಯೋಜನೆ, ಕೋಟ್ಯಂತರ ಬಡವರ ಪಾಲಿಗೆ ಸಂಜೀವಿನಿಯಾಯಿತು. ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್, ವಿದ್ಯಾಸಿರಿ ಸೇರಿದಂತೆ ಅವರು ತಂದ ಪ್ರತಿಯೊಂದು ಯೋಜನೆಯೂ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪುವ ಗುರಿ ಹೊಂದಿದ್ದವು. ಸಮಾಜವಾದಿ ಸಿದ್ಧಾಂತವನ್ನು ಕೇವಲ ಭಾಷಣಕ್ಕೆ ಸೀಮಿತಗೊಳಿಸದೆ, ಆಡಳಿತದಲ್ಲಿ ತಂದು ತೋರಿಸಿದ ಹೆಗ್ಗಳಿಕೆ ಅವರದ್ದು.
ಸ್ತ್ರೀಯರಿಗೆ ಅಣ್ಣ: ಮಹಿಳಾ ಸಬಲೀಕರಣದ ನವಪರ್ವ.
ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಗೆ ಸಿದ್ದರಾಮಯ್ಯ ನೀಡಿದ ಕೊಡುಗೆ ಅನನ್ಯ. 'ಗೃಹಲಕ್ಷ್ಮಿ' ಯೋಜನೆಯ ಮೂಲಕ ಕೋಟ್ಯಂತರ ಮಹಿಳೆಯರ ಕೈಗೆ ಪ್ರತಿ ತಿಂಗಳು ಆಸರೆಯ ಹಣ ನೀಡಿದ್ದು, 'ಶಕ್ತಿ' ಯೋಜನೆಯಡಿ ಉಚಿತ ಬಸ್ ಪ್ರಯಾಣದ ಸೌಲಭ್ಯ ಕಲ್ಪಿಸಿದ್ದು ಮಹಿಳಾ ಲೋಕದಲ್ಲಿ ಹೊಸ ಸಂಚಲನ ಮೂಡಿಸಿತು.ಬಡವರು ಹಾಗು ಮಧ್ಯಮವರ್ಗದವರಿಗೆ ಉಚಿತ ವಿದ್ಯುತ್ ನೀಡಿದ್ದು ಮನೆ ಖರ್ಚಿನಲ್ಲಿ ಸಾಕಷ್ಟು ಉಳಿತಾಯವಾಯಿತು. ಗೃಹಿಣಿಯರು, ಶ್ರಮಿಕ ಮಹಿಳೆಯರು ಅವರನ್ನು ಕೇವಲ ಒಬ್ಬ ಮುಖ್ಯಮಂತ್ರಿಯಾಗಿ ನೋಡಲಿಲ್ಲ; ಕಷ್ಟಕ್ಕೆ ಹೆಗಲು ಕೊಡುವ, ತವರಿಗೆ ಆಸರೆಯಾಗುವ ಒಬ್ಬ 'ಅಣ್ಣ'ನಾಗಿ ಪ್ರೀತಿಯಿಂದ ಸ್ವೀಕರಿಸಿದರು.
ದೇಶದ ನಂಬರ್ ಒನ್ ಮುಖ್ಯಮಂತ್ರಿ: ಆಡಳಿತದ ಗಟ್ಟಿತನ.
ಒಬ್ಬ ಜನಪ್ರಿಯ ನಾಯಕನಾಗಿ ಮಾತ್ರವಲ್ಲದೆ, ದೇಶದ ಅತ್ಯುತ್ತಮ ಆಡಳಿತಗಾರರಲ್ಲಿ ಸಿದ್ದರಾಮಯ್ಯ ಮುಂಚೂಣಿಯಲ್ಲಿದ್ದಾರೆ. ದಾಖಲೆಯ 15 ಕ್ಕೂ ಹೆಚ್ಚು ಬಜೆಟ್‌ಗಳನ್ನು ಮಂಡಿಸಿದ ಆರ್ಥಿಕ ತಜ್ಞ ಅವರು. ರಾಜ್ಯದ ಹಣಕಾಸು ಸ್ಥಿತಿಯನ್ನು ಹದಗೆಡಿಸದೆ, ಅಭಿವೃದ್ಧಿ ಮತ್ತು ಜನಕಲ್ಯಾಣ ಎರಡನ್ನೂ ಸಮತೋಲನದಲ್ಲಿ ಕೊಂಡೊಯ್ದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದ ಹಕ್ಕುಗಳಿಗಾಗಿ, ಕನ್ನಡ ಭಾಷೆ ಮತ್ತು ನೆಲದ ಅಸ್ಮಿತೆಗಾಗಿ ಅವರು ದಿಟ್ಟವಾಗಿ ಧ್ವನಿ ಎತ್ತಿದ ರೀತಿ ದೇಶದ ಗಮನ ಸೆಳೆದಿತ್ತು. ಅದಕ್ಕಾಗಿಯೇ ಅವರು ದೇಶದ ನಂಬರ್ ಒನ್ ಮುಖ್ಯಮಂತ್ರಿಗಳ ಸಾಲಿನಲ್ಲಿ ನಿಲ್ಲುತ್ತಾರೆ.
ಸಿದ್ದರಾಮಯ್ಯ ಎಂಬ ವ್ಯಕ್ತಿತ್ವ ಮತ್ತು ಅವರು ಬಿಟ್ಟುಹೋಗುತ್ತಿರುವ ಸಾಮಾಜಿಕ ನ್ಯಾಯದ ಪರಂಪರೆಗೆ ಎಂದಿಗೂ ಅಂತ್ಯವಿಲ್ಲ.
"ಅಧಿಕಾರ ಬರುತ್ತದೆ, ಹೋಗುತ್ತದೆ. ಆದರೆ ನಾವು ಜನರಿಗೆ ನೀಡಿದ ಆಡಳಿತ ಮತ್ತು ಸಾಮಾಜಿಕ ನ್ಯಾಯ ಇತಿಹಾಸದಲ್ಲಿ ಉಳಿಯುತ್ತದೆ."
ಸಿದ್ದರಾಮಯ್ಯನವರ ರಾಜಕೀಯ,ನೇರ ನಡೆ ನುಡಿ ಮತ್ತು ಬಡವರ ಪರವಾದ ನಿಲುವುಗಳು ಮುಂದಿನ ತಲೆಮಾರಿನ ರಾಜಕಾರಣಿಗಳಿಗೆ ಸದಾ ದಾರಿದೀಪ. ಹಳ್ಳಿ ಮೂಲದಿಂದ ಬಂದು, ಯಾವುದೇ ಗಾಡ್‌ಫಾದರ್ ಇಲ್ಲದೆ, ಕೇವಲ ಜನಬೆಂಬಲ ಮತ್ತು ಜನಪರ ಕಾಳಜಿಯಿಂದ ಇಷ್ಟೊಂದು ಎತ್ತರಕ್ಕೆ ಬೆಳೆದ ಸಿದ್ದರಾಮಯ್ಯನವರ ಯುಗ ಕರ್ನಾಟಕದ ಇತಿಹಾಸದಲ್ಲಿ ಬಂಗಾರದ ಅಕ್ಷರಗಳಲ್ಲಿ ಬರೆಯಲ್ಪಡುವಂಥದ್ದು.
0 Comments