kittur vijay news.ಮಹಿಳಾ ಮೀಸಲಾತಿ ನೆಪದಲ್ಲಿ ರಾಜಕೀಯ: ಕೇಂದ್ರದ ವಿರುದ್ಧ ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ ವಾಗ್ದಾಳಿ​.


​ಚ ಕಿತ್ತೂರು: ಸಂಸತ್ತಿನಲ್ಲಿ ಕ್ಷೇತ್ರ ವಿಂಗಡಣೆ ಮಸೂದೆ-2026 ವಿಫಲಗೊಂಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕೆಪಿಸಿಸಿ ಸದಸ್ಯೆ ರೋಹಿಣಿ ಬಾಬಾಸಾಹೇಬ ಪಾಟೀಲ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ಮಹಿಳಾ ಮೀಸಲಾತಿಯ ಹೆಸರಿನಲ್ಲಿ ಕೇಂದ್ರ ಸರ್ಕಾರವು ಸಾಂವಿಧಾನಿಕ ಮೌಲ್ಯಗಳನ್ನು ಗಾಳಿಗೆ ತೂರಲು ಪ್ರಯತ್ನಿಸಿತ್ತು ಎಂದು ಅವರು ವಿಷಾದಿಸಿದ್ದಾರೆ.

​ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, "ಕೇಂದ್ರ ಸರ್ಕಾರವು ಮಹಿಳಾ ಮೀಸಲಾತಿಯನ್ನು ಒಂದು ದಾಳವಾಗಿ ಬಳಸಿಕೊಂಡು, ತನ್ನ ರಾಜಕೀಯ ಲಾಭಕ್ಕಾಗಿ ಕ್ಷೇತ್ರ ವಿಂಗಡಣೆ ಮಸೂದೆಯನ್ನು ಅತ್ಯಂತ ತರಾತುರಿಯಲ್ಲಿ ಮಂಡಿಸಿತ್ತು. ಇದು ಮಹಿಳಾ ಸಬಲೀಕರಣದ ಹಿತದೃಷ್ಟಿಯಿಂದ ಮಾಡಿದ್ದಲ್ಲ, ಬದಲಾಗಿ ರಾಜಕೀಯ ಕುತಂತ್ರದಿಂದ ಕೂಡಿದ್ದಾಗಿತ್ತು. ಹಾಗಾಗಿಯೇ ಈ ಪ್ರಯತ್ನ ಇಂದು ಸಂಸತ್ತಿನಲ್ಲಿ ಸೋಲನ್ನು ಕಂಡಿದೆ," ಎಂದು ಟೀಕಿಸಿದರು.

​ಕಾಂಗ್ರೆಸ್ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದ ರೋಹಿಣಿ ಪಾಟೀಲ ಅವರು, "ಕಾಂಗ್ರೆಸ್ ಪಕ್ಷವು ಮೊದಲಿನಿಂದಲೂ ಮಹಿಳಾ ಮೀಸಲಾತಿಯ ಪರವಾದ ಗಟ್ಟಿಯಾದ ಚಿಂತನೆಯನ್ನು ಹೊಂದಿದೆ. ಶಾಸನಸಭೆಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂಬುದು ನಮ್ಮ ಪಕ್ಷದ ಅಚಲ ಬದ್ಧತೆ. ಆದರೆ, ಮೀಸಲಾತಿಯ ನೆಪದಲ್ಲಿ ಕ್ಷೇತ್ರ ವಿಂಗಡಣೆಯನ್ನು ಹೇರಲು ಹೊರಟಿರುವುದು ಮತ್ತು ಈ ವಿಚಾರದಲ್ಲಿ ಆತುರದ ರಾಜಕೀಯ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ. ಸರ್ಕಾರದ ಈ ಇಬ್ಬಗೆಯ ನೀತಿಯನ್ನು ನಾವು ಬಲವಾಗಿ ವಿರೋಧಿಸುತ್ತೇವೆ," ಎಂದರು.

​ಮಸೂದೆಯ ಸೋಲನ್ನು 'ದುರಂತ' ಎಂದು ಬಣ್ಣಿಸಿದ ಅವರು, "ಮಹಿಳೆಯರು ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಮುಖ್ಯವಾಹಿನಿಗೆ ಬರಲು ಈ ಮೀಸಲಾತಿ ಅತ್ಯಗತ್ಯವಾಗಿತ್ತು. ಇದು ಮಹಿಳೆಯರ ಸಬಲೀಕರಣಕ್ಕೆ ದೊಡ್ಡ ಆನೆಬಲವನ್ನು ನೀಡುತ್ತಿತ್ತು."
"ಇದು ಬಹುದಿನದ ಬೇಡಿಕೆಯಾಗಿದ್ದರೂ, ಸರ್ಕಾರದ ಸ್ವಾರ್ಥದಿಂದಾಗಿ ಇಂದು ಮಸೂದೆ ಸೋಲನ್ನು ಕಂಡಿರುವುದು ಮಹಿಳಾ ಕುಲಕ್ಕೆ ಆದ ದೊಡ್ಡ ನಷ್ಟ." ಎಂದು ಒತ್ತಿ ಹೇಳಿದರು.
 "ಸದ್ಯಕ್ಕೆ ಈ ಮಸೂದೆಗೆ ಸೋಲಾಗಿರಬಹುದು. ಆದರೆ ಮಹಿಳಾ ಮೀಸಲಾತಿಗಾಗಿ ನಮ್ಮ ಹೋರಾಟ ಮತ್ತು ಬೇಡಿಕೆ ನಿರಂತರವಾಗಿರುತ್ತದೆ. ಮುಂದೊಂದು ದಿನ ಯಾವುದೇ ರಾಜಕೀಯ ಗೊಂದಲಗಳಿಲ್ಲದೆ ಈ ಮಸೂದೆ ಖಂಡಿತವಾಗಿಯೂ ಜಾರಿಗೆ ಬರುತ್ತದೆ ಎಂಬ ವಿಶ್ವಾಸ ನನಗಿದೆ," ಎಂದು ಅವರು ಆಶಯ ವ್ಯಕ್ತಪಡಿಸಿದರು.
​ಮಹಿಳೆಯರ ಹಕ್ಕುಗಳ ವಿಚಾರದಲ್ಲಿ ಕೇಂದ್ರ ಸರ್ಕಾರವು ಇನ್ನುಮುಂದಾದರೂ ಪ್ರಾಮಾಣಿಕತೆಯಿಂದ ನಡೆದುಕೊಳ್ಳಲಿ ಎಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು.


Post a Comment

0 Comments