ಸಂಗೊಳ್ಳಿಯಲ್ಲಿ ಪ್ರಚಾರ ಉಪ ಸಮಿತಿ ಸಭೆ
ಸಂಗೊಳ್ಳಿ ಉತ್ಸವ: ವ್ಯಾಪಕ ಪ್ರಚಾರಕ್ಕೆ ಕ್ರಮ
ರಾಯಣ್ಣನ ಸಂಗೊಳ್ಳಿ : ಜ.17 ಹಾಗೂ 18 ರಂದು ನಡೆಯಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ವ್ಯಾಪಕವಾದ ಪ್ರಚಾರ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಉತ್ಸವದ ಪ್ರಚಾರ ಉಪ ಸಮಿತಿಯ ಅಧ್ಯಕ್ಷ ವಾರ್ತಾ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ತಿಳಿಸಿದರು.
ಸಂಗೊಳ್ಳಿ ಉತ್ಸವ-2024 ಕ್ಕೆ ಸಂಬಂಧಿಸಿದಂತೆ ಸಂಗೊಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಡೆದ ಉತ್ಸವದ ಪ್ರಚಾರ ಉಪ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಬಾರಿ ಉತ್ಸವದ ಭಾಗವಹಿಸಲಿರುವ ಮುಖ್ಯಮಂತ್ರಿಗಳು ಉತ್ಸವದ ಸಂದರ್ಭದಲ್ಲಿ ಸಂಗೊಳ್ಳಿಯ ಸೈನಿಕ ಶಾಲೆ ಮತ್ತು ರಾಕ್ ಗಾರ್ಡನ್ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.
ಉತ್ಸವಕ್ಕೆ ಸಂಬಂಧಿಸಿದಂತೆ ಪೋಸ್ಟರ್, ಬ್ಯಾನರ್, ಆಮಂತ್ರಣ ಪತ್ರಿಕೆ ಮತ್ತಿತರ ಪ್ರಚಾರ ಸಾಮಗ್ರಿಗಳು ಸಿದ್ಧವಾದ ತಕ್ಷಣವೇ ಅವುಗಳನ್ನು ಬಳಸಿಕೊಂಡು ವ್ಯಾಪಕ ಪ್ರಚಾರ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಪ್ರಚಾರ ಉಪ ಸಮಿತಿ ಸದಸ್ಯರು, ಉತ್ಸವಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ತಕ್ಷಣವೇ ಜಿಲ್ಲೆಯಾದ್ಯಂತ ಬ್ಯಾನರ್ ಮತ್ತು ಪೋಸ್ಟರ್ ಗಳನ್ನು ಅಳವಡಿಸಲು ಕ್ರಮಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಉತ್ಸವದ ಕಾರ್ಯಕ್ರಮಗಳನ್ನು ಸಾರ್ವಜನಿಕರು ವೀಕ್ಷಿಸಲು ಅನುಕೂಲವಾಗುವಂತೆ ಯೂಟ್ಯೂಬ್ ನಲ್ಲಿ ನೇರಪ್ರಸಾರ ಮಾಡಬೇಕು. ಸದರಿ ಯೂಟ್ಯೂಬ್ ಪ್ರಸಾರದ ಲಿಂಕ್ ಸೃಷ್ಟಿಸಿ ಎಲ್ಲೆಡೆ ಹಂಚಿಕೊಳ್ಳಬೇಕು ಎಂದು ಅವರು ಹೇಳಿದರು.
ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಬ್ಯಾನರ್ ಅಳವಡಿಸಬೇಕು; ಸಾರಿಗೆ ಸಂಸ್ಥೆ ಬಸ್ ಗಳ ಹಿಂಭಾಗದಲ್ಲಿ ಪೋಸ್ಟರ್ ಅಂಟಿಸಬೇಕು; ಉತ್ಸವದಲ್ಲಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕುಸ್ತಿ ಪಂದ್ಯಾವಳಿಯ ಸಮಗ್ರ ಮಾಹಿತಿಯನ್ನು ಒಳಗೊಂಡ ಕರಪತ್ರಗಳನ್ನು ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಂಚಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರು ಸಲಹೆ ನೀಡಿದರು.
ಸಭೆಯಲ್ಲಿ ಚರ್ಚಿಸಲಾಗಿರುವ ವಿಷಯಗಳನ್ನು ಜಿಲ್ಲಾಧಿಕಾರಿಗಳು ಮತ್ತು ಉಪ ವಿಭಾಗಾಧಿಕಾರಿಗಳ ಗಮನಕ್ಕೆ ತಂದು ತ್ವರಿತವಾಗಿ ಪ್ರಚಾರಕಾರ್ಯ ಆರಂಭಿಸಲಾಗುವುದು ಎಂದು ಉಪ ನಿರ್ದೇಶಕ ಗುರುನಾಥ ಕಡಬೂರ ತಿಳಿಸಿದರು.
ಸಂಗೊಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಫಕ್ಕೀರಪ್ಪ ಕುರಿ, ಸದಸ್ಯರಾದ ಬಸವರಾಜ ಕೊಡ್ಲಿ, ಗಂಗಪ್ಪ ಕುರಿ, ಸುರೇಶ್ ಚಚಡಿ, ಗಂಗಪ್ಪ, ಪ್ರಚಾರ ಉಪ ಸಮಿತಿ ಸದಸ್ಯರಾದ ಬಾಬುಸಾಬ್ ಖುದುನ್ನವರ, ಬಾಬು ಎಸ್. ಸಿಂಗಾಡಿ, ಬೈಲಹೊಂಗಲ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಮಹಾಂತೇಶ್ ತುರಮರಿ, ಪತ್ರಕರ್ತ ಉದಯ್ ಕೋಳೆಕರ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡು ಸಲಹೆಗಳನ್ನು ನೀಡಿದರು. ವಾರ್ತಾ ಇಲಾಖೆಯ ಸಿಬ್ಬಂದಿ ಅನಂತ್ ಪಪ್ಪು, ಸಂಗೊಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಉಪಸ್ಥಿತರಿದ್ದರು.
0 Comments