13 ಕೋಟಿ ವೆಚ್ಚದಲ್ಲಿ ನೂತನ ಸಿಟಿ ಬಸ್‌ ನಿಲ್ದಾಣ; ರಾಮಲಿಂಗಾ ರಡ್ಡಿ

ಎಂ.ಕೆ. ನ್ಯೂಸ್ 

ಧಾರವಾಡ: ಧಾರವಾಡ ನಗರ ಸಾರಿಗೆ ನೂತನ ಸಿಬಿಟಿ ನಿರ್ಮಾಣ ಕಾಮಗಾರಿಗೆ ರಾಜ್ಯ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಸಿಬಿಟಿ ಆವರಣದಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು ಧಾರವಾಡ ನಗರ ಸಾರಿಗೆಯ ಸಿಬಿಟಿ ನಿಲ್ದಾಣಕ್ಕೆ ಅಗತ್ಯವಿರುವ ನೂತನ ಕಟ್ಟಡವನ್ನು ರೂ 13.11 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಇಲ್ಲಿನ ಸಿಬಿಟಿ ಬಹಳ ಹಳೆಯದಾದ ಕಟ್ಟಡ ಹೊಂದಿದ್ದು ಈಗ ಈ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಒಂದು ವರ್ಷದ ಅವಧಿಯಲ್ಲಿ ನಿಲ್ದಾಣದ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದರು.

ನಗರ ಸಾರಿಗೆ ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಹೆಚ್ಚುವರಿ ಬಸ್‌ಗಳ ಖರೀದಿ ಮಾಡಲಾಗುತ್ತಿದ್ದು, ಇದರಿಂದ ಬಸ್‌ಗಳ ಕೊರತೆ ನೀಗಲಿದೆ. ಅಂದಾಜು 50 ವರ್ಷಗಳ ಹಳೆಯದಾದ ಧಾರವಾಡದ ಸಿಬಿಟಿಯನ್ನು ಇದೀಗ ಮೇಲ್ದರ್ಜೆಗೇರಿಸಲಾಗುತ್ತಿದೆ. ನಕತರ ರೂ 23.48 ಕೋಟಿ ವೆಚ್ಚದಲ್ಲಿ ಹುಬ್ಬಳ್ಳಿ ಗೋಕುಲ ರಸ್ತೆ ಬಸ್‌ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದರು.

ಏನೇನು ಅಭಿವೃದ್ಧಿ

ಧಾರವಾಡ ನಗರ ಸಾರಿಗೆ ಬಸ್‌ ನಿಲ್ದಾಣ ಕಾಮಗಾರಿಯಲ್ಲಿ ಮುಖ್ಯ ಕಟ್ಟಡ, ಮಹಿಳೆಯರಿಗಾಗಿ ವಿಶ್ರಾಂತಿ ಗೃಹ, ಮಹಿಳೆ ಮತ್ತು  ಪುರುಷರಿಗೆ ಪ್ರತ್ಯೇಕ ಶೌಚಾಲಯ, ಆವರಣದಲ್ಲಿ ಸಿಸಿ ಅಳವಡಿಸುವುದು, ಬಸ್‌ಗಳ ನಿಲುಗಡೆಗೆ 4 ಅಂಕಣ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಉತ್ತಮ ಆಸನದ ವ್ಯವಸ್ಥೆ, ಉಪಹಾರ ಗೃಹ ಮತ್ತು ವಾಣಿಜ್ಯ ಮಳಿಗೆ, ಸಿಬ್ಬಂದಿ ವಿಶ್ರಾಂತಿ ಕೊಠಡಿ ಹಾಗೂ ಸಂಚಾರ ನಿಯಂತ್ರಣ ಕೊಠಡಿ, ಮೊದಲನೇ ಮಹಡಿಯಲ್ಲಿ ಕಚೇರಿ ಉಪಯೋಗಕ್ಕಾಗಿ ಕೊಠಡಿ ನಿರ್ಮಾಣ ಮಾಡಲಾಗುವುದು ಎಂದರು.

ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌, ಶಾಸಕ ಎನ್‌.ಎಚ್‌. ಕೋನರಡ್ಡಿ, ವಾಕರಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್‌.ಭರತ್‌ ಸೇರಿದಂತೆ ವಿವಿಧ ಅಧಿಕಾರಿಗಳು, ಮುಖಂಡರು ಇದ್ದರು.

Post a Comment

0 Comments