ಸಂಗೊಳ್ಳಿ ರಾಯಣ್ಣನ ದೇಶಪ್ರೇಮ ಯುವ ಸಮುದಾಯಕ್ಕೆ ಸ್ಫೂರ್ತಿ: ಶಾಸಕ ವಿಠ್ಠಲ ಹಲಗೇಕರ

ಎಂ. ಕೆ. ವಾಣಿ ನ್ಯೂಸ್ 

ಬೆಳಗಾವಿ : ಕ್ರಾಂತಿ ವೀರ ಶೂರ ಸಂಗೊಳ್ಳಿ ರಾಯಣ್ಣ ದೇಶದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರ. ಕಿತ್ತೂರು ರಾಣಿ ಚನ್ನಮ್ಮನವರ ಬಲಗೈ ಬಂಟನಾಗಿ ದೈತ್ಯೆ ಬ್ರಿಟಿಷರ ವಿರುದ್ಧ ಸಿಡಿದೆದ್ದು ದೇಶದ ಸ್ವಾತಂತ್ರಕ್ಕಾಗಿ ನೇಣುಗಂಬದವರೆಗೆ ನಿರಂತರ ಸೆಣಸಿದ ಮಹಾನ್ ವೀರ,ಶೂರ ಸಂಗೊಳ್ಳಿ ರಾಯಣ್ಣ ಎಂದು ಖಾನಾಪೂರ ಶಾಸಕ ವಿಠ್ಠಲ ಹಲಗೇಕರ ಹೇಳಿದರು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾಡಳಿತ ಸಂಯುಕ್ತ ಆಶ್ರಯದಲ್ಲಿ ನಂದಗಡದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಐಕ್ಯ ಸ್ಥಳದಲ್ಲಿ ನಡೆದ ನಂದಗಡ ಉತ್ಸವ ಹಿನ್ನಲೆಯಲ್ಲಿ ರಾಯಣ್ಣನ ವೀರಜ್ಯೋತಿಗೆ ಚಾಲನೆ ನೀಡಿ  ಅವರು ಮಾತನಾಡಿದರು.

ಸಂಗೊಳ್ಳಿ ರಾಯಣ್ಣ ಸಂಗೊಳ್ಳಿಯಲ್ಲಿ ಜನ್ಮ ಪಡೆದರು ತಮ್ಮ ಆಶಯದಂತೆ ಅವರು ಐಕ್ಯರಾಗಿದ್ದು, ನಂದಗಡದಲ್ಲಿ. ರಾಯಣ್ಣ ಕೇವಲ 33 ವರ್ಷ ಬದುಕಿದರು. ಇಡೀ ಜಗತ್ತು ಅವರ ಹೆಸರು ಗುರುತಿಸುವಷ್ಟು ದೊಡ್ಡ ಹೆಸರು ಸಂಪಾದನೆ ಮಾಡಿದ್ದಾರೆ. ರಾಯಣ್ಣನ ದೇಶ ಪ್ರೇಮ, ನಿಸ್ವಾರ್ಥ ಸೇವೆ ಇಂದಿನ ಯುವ ಪೀಳಿಗೆಗೆ ಸ್ಫೂರ್ತಿ ಎಂದು ಹೇಳಿದರು.

ಸಂಗೊಳ್ಳಿ ರಾಯಣ್ಣನಂತಹ ಮಕ್ಕಳು ಪ್ರತಿ ಮನೆ ಮನೆಯಲ್ಲಿ ಜನಿಸಲಿ ಎಂಬುದು ಪ್ರತಿಯೊಬ್ಬರ ಆಸೆ. ಅವರ ಜನ್ಮದಿನ ಆಗಸ್ಟ್ 15 ದೇಶಕ್ಕೆ ಸ್ವಾತಂತ್ರ್ಯ ದೊರೆತ ದಿನವಾದರೆ, ಹುತಾತ್ಮರಾದ ದಿನ ಜನವರಿ 26 ಭಾರತ ಗಣರಾಜ್ಯೋತ್ಸವ ದಿನವಾಗಿರುವುದು ವಿಶೇಷ.


ಸಂಗೊಳ್ಳಿ ಉತ್ಸವದಂತೆ ನಂದಗಡದಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ಉತ್ಸವ ಮಾಡಬೇಕು ಎಂದು

ಅಭಿಮಾನಿಗಳ ಬೇಡಿಕೆಯಾಗಿತ್ತು. ಅದರಂತೆ ಸರ್ಕಾರ ಸಹ ಇದಕ್ಕೆ ಅನುಮತಿ ನೀಡಿ ಈ ವರ್ಷ ಜಿಲ್ಲಾಡಳಿತದಿಂದ ನಂದಗಡ ಉತ್ಸವ ಆಚರಣೆ ಮಾಡಲಾಗುತ್ತಿದೆ. ಬರುವ ವರ್ಷದಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ನಂದಗಡ ಉತ್ಸವ ನಡೆಯಲಿ ಎಂಬುದು ನನ್ನ ಆಶಯವಾಗಿದೆ ಎಂದರು.

ಬೆಳಗಾವಿ ಉಪವಿಭಾಗಾಧಿಕಾರಿ ಶವ್ರಣ ನಾಯಕ, ಖಾನಾಪೂರ ತಹಶೀಲ್ದಾರ ಪ್ರಕಾಶ ಗಾಯಕವಾಡ,  ನಂದಗಡ ಗ್ರಾಮ ಪಂಚಾಯತಿ ಅಧ್ಯಕ್ಷ ಯಲ್ಲಪ್ಪ ಶಿವಾಜಿ ಗುರವ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಇತರರು ಇದ್ದರು.

Post a Comment

0 Comments