ಸಂಗೊಳ್ಳಿ ರಾಯಣ್ಣ ಶೌರ್ಯಭೂಮಿ; ದೇಶಪ್ರೇಮಕ್ಕೆ ಸ್ಫೂರ್ತಿ: ಡಾ.ಕೆ. ಧರಣಿದೇವಿ


ಸಂಗೊಳ್ಳಿ ರಾಯಣ್ಣ ಶೌರ್ಯಭೂಮಿ; ದೇಶಪ್ರೇಮಕ್ಕೆ ಸ್ಫೂರ್ತಿ: ಡಾ.ಕೆ.ಧರಣಿದೇವಿ ಮಾಲಗತ್ತಿ


ರಾಯಣ್ಣನ ಸಂಗೊಳ್ಳಿ : ಇದೇ ಜ.17 ಹಾಗೂ 18 ರಂದು ಕ್ರಾಂತಿವೀರ ಶೂರ ಸಂಗೊಳ್ಳಿ ರಾಯಣ್ಣ ಉತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಡಾ.ಕೆ ಧರಣಿದೇವಿ ಮಾಲಗತ್ತಿ ಅವರು ಸಂಗೊಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದರು.

ನಂದಗಡದಿಂದ ಬೆಳಗಾವಿ ನಗರಕ್ಕೆ ಆಗಮಿಸಿದ ಸಂಗೊಳ್ಳಿ ರಾಯಣ್ಣ ವೀರಜ್ಯೋತಿಯನ್ನು ಸ್ವಾಗತಿಸಿದ ಬಳಿಕ ಅವರು ಸಂಗೊಳ್ಳಿ ಗ್ರಾಮಕ್ಕೆ ಭೇಟಿ ನೀಡಿದರು.

ಸರಕಾರವು ಈ ಬಾರಿ ಸಂಗೊಳ್ಳಿ ಉತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ 1.50 ಕೋಟಿ ರೂಪಾಯಿ ಅನುದಾನ ನೀಡಿದ್ದು, ಅರ್ಥಪೂರ್ಣ ಹಾಗೂ ಅದ್ಧೂರಿಯಾಗಿ ಉತ್ಸವ ಆಚರಿಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಸಿದ್ಧತೆಗಳು ನಡೆದಿವೆ ಎಂದು ತಿಳಿಸಿದರು.


ಗ್ರಾಮದ ಶಾಲೆಯ ಬಳಿ ಉತ್ಸವದ ಬೃಹತ್ ವೇದಿಕೆ ನಿರ್ಮಾಣ ಕಾರ್ಯವನ್ನು ವೀಕ್ಷಿಸಿದರು. 

ಕಾರ್ಯಕ್ರಮದಲ್ಲಿ ಸಾವಿರಾರು ಜನರು‌ ಭಾಗವಹಿಸುವುದರಿಂದ ಕುಡಿಯುವ ನೀರು, ಮೊಬೈಲ್ ಶೌಚಾಲಯ, ಪಾರ್ಕಿಂಗ್ ಮತ್ತಿತರ ಸೌಕರ್ಯಗಳನ್ನು ಕೂಡ ಜಿಲ್ಲಾಡಳಿತದ ವತಿಯಿಂದ ಒದಗಿಸಲಾಗುವುದು ಎಂದು ತಿಳಿಸಿದರು. 

ಸಂಗೊಳ್ಳಿ ರಾಯಣ್ಣನ ಜೀವನ ಯುವಕರಿಗೆ ಮಾದರಿ:

ಉತ್ಸವದ ಸಂದರ್ಭದಲ್ಲಿ ಸಂಗೊಳ್ಳಿ ರಾಯಣ್ಣ ಶೌರ್ಯಭೂಮಿ(ಶಿಲ್ಪವನ) ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಲಿದ್ದಾರೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ದೇಶಪ್ರೇಮ, ಜೀವನ ಚರಿತ್ರೆ ಹಾಗೂ ಶೌರ್ಯವನ್ನು ಬಿಂಬಿಸುವ ಮಾಹಿತಿಯನ್ನು ಈ ವನದಲ್ಲಿ ಅಚ್ಚುಕಟ್ಟಾಗಿ ಪ್ರದರ್ಶಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದಕ್ಕೂ ಮುಂಚೆ ಗ್ರಾಮದಲ್ಲಿನ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅವರು ಮಾಲಾರ್ಪಣೆ ಮಾಡಿದರು.

ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್.ಚನ್ನೂರ, ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಗ್ರಾ ಪಂ ಪದಾಧಿಕಾರಿಗಳು ಸರ್ವ ಸದಸ್ಯರು, ಗ್ರಾಮಸ್ಥರು ಸೇರಿದಂತೆ ಇತರರು ಇದ್ದರು.

Post a Comment

0 Comments