Belagavi : ಮಹಾರಾಷ್ಟ್ರ: ಕೆಎಸ್‌ಆರ್‌ಟಿಸಿಯ 10 ಬಸ್‌ಗಳಿಗೆ ಬಿತ್ತು ಬೆಂಕಿ!


ಮಹಾರಾಷ್ಟ್ರ: ಕೆಎಸ್‌ಆರ್‌ಟಿಸಿಯ 10 ಬಸ್‌ಗಳಿಗೆ ಬಿತ್ತು ಬೆಂಕಿ!

ಮರಾಠ ಸಮುದಾಯಕ್ಕೆ ರಾಜ್ಯ ಸರ್ಕಾರ ನೀಡಿದ್ದ ಮೀಸಲಾತಿಯನ್ನು ಸುಪ್ರೀಂಕೋರ್ಟ್‌ ರದ್ದುಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಜಾಲ್ನಾ ಜಿಲ್ಲೆಯ ಶಹಘಡ ಬಳಿ ಧುಳೆ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ತಡೆದ ಮರಾಠಾ ಹೋರಾಟಗಾರರು ಹಿಂಸೆಗೆ ಇಳಿದಿದ್ದಾರೆ.

ಜಾಲ್ನಾ/ಬೆಳಗಾವಿ: ಮರಾಠಾ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಒತ್ತಾಯಿಸಿ ಮಹಾರಾಷ್ಟ್ರದ ಜಾಲ್ನಾ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ಶುಕ್ರವಾರ ಹಿಂಸಾಚಾರಕ್ಕೆ ತಿರುಗಿದೆ. ಘಟನೆಯಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆಗಳಿಗೆ ಸೇರಿದ 10 ಬಸ್ಸಿಗೆ ಬೆಂಕಿ ಹಚ್ಚಲಾಗಿದೆ. ಘಟನೆಯಲ್ಲಿ 18 ಪೊಲೀಸರು ಮತ್ತು 20ಕ್ಕೂ ಹೆಚ್ಚು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ.

ಉದ್ರಿಕ್ತರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಹಾಗೂ ಅಶ್ರುವಾಯು ಸಿಡಿಸಿದ್ದಾರೆ. ಅಲ್ಲದೇ ಗಾಳಿಯಲ್ಲಿ ಕೆಲ ಸುತ್ತಿನ ಗುಂಡುಗಳನ್ನೂ ಹಾರಿಸಲಾಗಿದೆ. ಈ ನಡುವೆ ಶಾಂತಿ ಕಾಪಾಡಲು ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಶಿವಸೇನಾ ನಾಯಕ ಏಕನಾಥ ಶಿಂಧೆ ಮನವಿ ಮಾಡಿದ್ದಾರೆ.

ಬಸ್‌ ಸಂಚಾರ ನಿಲ್ಲಿಸುತ್ತೇವೆ: ರಾಮಲಿಂಗಾರೆಡ್ಡಿ 
ಮಹಾರಾಷ್ಟ್ರದ ಗಲಾಟೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳಿಗೆ ಬೆಂಕಿ ಬಿದ್ದಿದ್ದರೆ, ಗದ್ದಲ ಕಡಿಮೆಯಾಗುವವರೆಗೂ ಬಸ್‌ ಸಂಚಾರ ಸ್ಥಗಿತಗೊಳಿಸುವ ಬಗ್ಗೆ ತೀರ್ಮಾನಿಸಲಾಗುವುದು. ನಮ್ಮ ಬಸ್‌ಗಳಿಗೆ ರಕ್ಷಣೆ ನೀಡಲು ಮಹಾರಾಷ್ಟ್ರ ಸರ್ಕಾರವನ್ನು ಮನವಿ ಮಾಡುತ್ತೇವೆ ಎಂದು ಕರ್ನಾಟಕ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. 



Post a Comment

0 Comments