ಕೊಡಗು: ಕೊಡಗಿನ ಮೂರ್ನಾಡು ಸಮೀಪವಿರುವ ಹೊದ್ದೂರು ಗ್ರಾಮದ ಕಬಡಕೇರಿ ಎಂಬಲ್ಲಿ ಜನಿಸಿ ಬೆಳೆದ ತಂಝೀನ ನವರಿಗೆ ಮಕ್ಕಳು ಎಂದರೆ ಪಂಚಪ್ರಾಣ.
ಎಲ್ಲಾ ಮಕ್ಕಳನ್ನು ತನ್ನ ಸ್ವಂತ ಮಕ್ಕಳನ್ನಾಗಿ ಕಂಡು,ಅವರಿಗೆ ಬೇಕಾದ ಸವಲತ್ತುಗಳಿಗೆ ಹಗಲು ರಾತ್ರಿ ಲೆಕ್ಕಿಸದೆ ದುಡಿಯುವ ಅಂಗನವಾಡಿ ಕಾರ್ಯಕರ್ತೆ.
2019 ರಲ್ಲಿ ಸ್ವಂತ ಊರಿನಲ್ಲೇ ಅಂಗನವಾಡಿ ಕಾರ್ಯಕರ್ತೆಯಾಗಿ ನೇಮಕಗೊಂಡು, ತನ್ನ ಊರಿನಲ್ಲಿಯೇ ಸಾಕ್ಷರತೆಯಿಂದ ವಂಚಿತರಾಗುತ್ತಿದ್ದ ಅದೆಷ್ಟೋ ಪುಟಾಣಿಗಳನ್ನು ಬೆಳಗಿಸಿದ ತಂಝೀನ ಬರೀ ಊರಿನ ಮಕ್ಕಳಿಗೆ ಮಾತ್ರ ಸೀಮಿತವಾಗದೆ ಸಾಕ್ಷರತೆಯಿಂದ ವಂಚಿತರಾಗುತ್ತಿದ್ದ ಅದೆಷ್ಟೋ ವಲಸೆ ಕಾರ್ಮಿಕರ ಪುಟಾಣಿಗಳನ್ನೂ ಹುಡುಕಿ ಹೊರ ಸಂಚಾರದ ವೇಳೆ ಅವರೀಗೆ ಬೇಕಾದ ಶಿಕ್ಷಣವನ್ನು ಪೂರೈಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಕ್ಕಳ ಕಲಿಕೆಗೆ ಅವಶ್ಯಕ ವಸ್ತುಗಳನ್ನು ಊರಿನ ಗಣ್ಯರೊಡನೆ ಹಾಗೂ ಅಧಿಕಾರಿಗಳೊಡನೆ ಮಾತುಕತೆ ನಡೆಸಿ ಟಿ.ವಿ ಹಾಗೂ ಮತ್ತಿತರ ವರ್ಣರಂಜಿತ ಆಟಿಕೆಗಳನ್ನು ಪೂರೈಸುವಲ್ಲಿ ಇವರು ಯಶಸ್ವಿಯಾಗಿದ್ದಾರೆ.
ಅಂಗನವಾಡಿ ಕೇಂದ್ರದಲ್ಲಿ ಲೈಬ್ರರಿ ಪ್ರಾರಂಭಿಸಿದ ಕೊಡಗಿನ ಮೊಟ್ಟ ಮೊದಲ ಅಂಗನವಾಡಿ ಕೇಂದ್ರ ಇದಾಗಿದ್ದು ಇತರರಿಗೂ ಮಾದರಿಯಾಗಿದ್ದಾರೆ.
ಇವರ ಈ ಒಂದು ಉತ್ತಮ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಇದೀಗಾಗಲೇ ಅನೇಕ ಪ್ರಶಸ್ತಿಗಳು ಇವರ ಕೈ ಸೇರಿದೆ.
ಅದಲ್ಲದೇ ಅಂಗನವಾಡಿ ಕಾರ್ಯಕರ್ತೆಯಾಗಿ ವೃತ್ತಿ ಆರಂಭಿಸಿದ ಕೇವಲ 4 ವರ್ಷದಲ್ಲೇ, ಮಾತೃವಂದನಾ-ಭಾಗ್ಯಲಕ್ಷ್ಮಿ ಯೋಜನೆಯ ಸೌಲಭ್ಯಗಳನ್ನು ಫಲಾನುಭವಿಗಳಿಗೆ ದೊರಕಿಸಿಕೊಡುವಲ್ಲಿನ ನಿರಂತರ ಪ್ರಯತ್ನ, ಸಮ ಶಿಶು ಅಭಿವೃದ್ಧಿ ಯೋಜನೆಯ ಸೌಲಭ್ಯಗಳನ್ನು ಫಲಾನುಭವಿಗಳಿಗೆ ಸಮರ್ಪಕವಾಗಿ ಒದಗಿಸಲು ತೆಗೆದುಕೊಂಡಿರುವ ಕ್ರಮಗಳನ್ನು ಗುರುತಿಸಿ ರಾಜ್ಯದಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ಬಸವರಾಜ ಬೊಮ್ಮಾಯಿ ಅವರು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಕೊಡಗಿನ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಗೆ ನೀಡುವ ಪ್ರಶಸ್ತಿಯನ್ನು 2023ರಲ್ಲಿ ತಂಝೀನಾ ಬಾನುಗೆ ನೀಡಿ ಗೌರವಿಸಿದರು.
ಇವರು ಅಂಗನವಾಡಿಯ ಪುನರ್ನಿರ್ಮಾಣದ ವೇಳೆಯಲ್ಲಿ ರಾತ್ರಿ 11 ಗಂಟೆಯಾದರೂ ಇದರ ಹಿಂದೆಯೇ ನಿಂತು ಕೆಲಸ ನಿರ್ವಹಿಸುತ್ತಿದ್ದರು. ಮಾತ್ರವಲ್ಲದೆ ಮಕ್ಕಳ ಕಲಿಕೆಗೆ ಅವಶ್ಯಕವಿರುವ ವರ್ಣರಂಜಿತ ಉದ್ಯಾನವನವನ್ನು ಊರಿನವರ ನೆರವಿನಿಂದ ನಿರ್ಮಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಈಗಿನ ಪೀಳಿಗೆಯು ಹೆಚ್ಚು ಆದ್ಯತೆ ನೀಡುತ್ತಿರುವ ಆಂಗ್ಲ ಭಾಷೆಯನ್ನು ಕೂಡ ತಮ್ಮ ಅಂಗನವಾಡಿ ಕೇಂದ್ರದಲ್ಲಿ ಕಲಿಸುತ್ತಿರುವುದು ಆಕರ್ಷಣೀಯ.
ಈ ಕಾರಣದಿಂದ ಪಕ್ಕದ ಊರಿನ ಪೋಷಕರೂ ಸಹಾ ತಮ್ಮ ಮಕ್ಕಳನ್ನು ಈ ಒಂದು ಅಂಗನವಾಡಿಗೆ ಕಳುಹಿಸಲು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ.
ಇದಕ್ಕೆಲ್ಲಾ ಮುಖ್ಯ ಕಾರಣ ತಂಝೀನ ರವರ ಪ್ರಯತ್ನ ಹಾಗೂ ತಾಳ್ಮೆ ಎಂದರೆ ತಪ್ಪಾಗಲಾರದು.
0 Comments