ರಾಜ್ಯ ರಾಜಕಾರಣದಲ್ಲಿ ಧಣಿ ಎಂದೇ ಖ್ಯಾತರಾದ ಮಾಜಿ ಸಚಿವ ಡಿ.ಬಿ.ಇನಾಮದಾರ ಅವರ ಪ್ರಥಮ ಪುಣ್ಯಸ್ಮರಣೆ ಇಂದು

 

ಮಾಜಿ ಸಚಿವ ದಿ. ಡಿ. ಬಿ. ಇನಾಮದಾರ ಅವರ ಭಾವಚಿತ್ರ


ವರದಿಬಸವರಾಜ ಶಂ ಚಿನಗುಡಿ, ವರದಿಗಾರರು ಉದಯವಾಣಿ ಹಾಗೂ ಅಧ್ಯಕ್ಷರು 

ಕರ್ನಾಟಕ ಕಾರ್ಯನಿತ ಪತ್ರಕರ್ತರ ಧ್ವನಿ ಸಂಘ ತಾಲೂಕಾ ಘಟಕ ಚನ್ನಮ್ಮನ ಕಿತ್ತೂರು

ಕಿತ್ತೂರ ವಿಜಯ

ಚನ್ನಮ್ಮನ ಕಿತ್ತೂರು: ರಾಜ್ಯ ರಾಜಕಾರಣದಲ್ಲಿ ಧಣಿ ಎಂದೇ ಖ್ಯಾತರಾದ ಡಿ.ಬಿ.ಇನಾಮದಾರ ಅವರು ನಮ್ಮನ್ನು ಅಗಲಿ ಇಂದಿಗೆ ಒಂದು ವರ್ಷ ಕಳೆಯಿತು. ಎಂಬತ್ತರ ದಶಕದಲ್ಲಿ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟ ದಾನಪ್ಪಗೌಡ ಬಸನಗೌಡ ಇನಾಮದಾರ ಅವರು ವಿಧಾನಸೌಧದಲ್ಲಿ ಎಲ್ಲರಿಂದಲೂ ಧಣಿ ಎಂದೇ ಹೆಸರಾದವರು. ಡಿ.ಬಿ.ಇನಾಮದಾರ ಅವರ ತಂದೆ ಬಸನಗೌಡ ದಾನಪ್ಪಗೌಡ ಇನಾಮದಾರ ಅವರ ಅಕಾಲಿಕ ನಿಧನದ ನಂತರ ನಡೆದ ಉಪ ಚುನಾವಣೆಯಲ್ಲಿ ಜನತಾದಳದಿಂದ ಚಿಕ್ಕ ವಯಸ್ಸಿನಲ್ಲಿಯೇ ಡಿ.ಬಿ. ಇನಾಮದಾರ ಅವರು ಮೊಟ್ಟ ಮೊದಲ ಬಾರಿ ಶಾಸಕರಾದರು. ರಾಮಕೃಷ್ಣ ಹೆಗಡೆ ಅವರ ಸಂಪುಟದಲ್ಲಿ ಸಚಿವರೂ ಆಗಿ ಕಾರ್ಯನಿರ್ವಹಿಸಿದರು.   ಕಾಲಘಟ್ಟದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಇನಾಮದಾರ ಮನೆತನ ಅತ್ಯಂತ ಪ್ರಭಾವಶಾಲಿ ರಾಜಕಾರಣದ ಮನೆತನವಾಗಿತ್ತು. ನಂತರ ಸತತ ಮೂರು ಬಾರಿ ಕಿತ್ತೂರು ವಿಧಾನಸಭಾ ಕ್ಷೇತ್ರದಿಂದ ಆಯ್ಕೆ ಆಗುವ ಮೂಲಕ ಅಬಕಾರಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಅತಿ ಹೆಚ್ಚು ಬಾರಿ ಕಿತ್ತೂರ ಮತ ಕ್ಷೇತ್ರವನ್ನು ಆಳಿದ ಹೆಗ್ಗಳಿಕೆ ಧನಿಗಿದೆ ತಿಗಡಿ ಹರಿನಾಲಾ ನೀರಾವರಿ ಯೋಜನೆ, ಕಿತ್ತೂರು ತಾಲೂಕು ರಚನೆ ಹಾಗೂ ವಿಶೇಷ ತಹಶೀಲ್ದಾರ  ನೇಮಕ ಮಿನಿ ವಿಧಾನಸೌಧ ಕಟ್ಟಡ ರೂಪು ರೇಷೆ, ಕಿತ್ತೂರು ಉತ್ಸವ ಆಚರಣೆಗೆ ಕ್ರಮ, ಕೆರೆ ತುಂಬುವ ಕಾಮಗಾರಿಗಳ ಚಾಲನೆ, ರಸ್ತೆ ಅಭಿವೃದ್ಧಿ ಕಾಮಗಾರಿಗಳು, ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ, ರಾಜ್ಯದಲ್ಲಿಯೇ ಮೊಟ್ಟ ಮೊದಲ ಟೆಲಿಫೋನ್ ಬೂತ್ ಕಿತ್ತೂರಿನಲ್ಲಿ ಲೋಕಾರ್ಪಣೆ, .ಜಾ ಹಾಗೂ ಪ.ಪಂಗಡ ಕಾಲನಿಗಳಿಗೆ ಕಾಂಕ್ರೀಟ್ ರಸ್ತೆ ಮೊದಲಾದ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ.

ಡಿ.ಬಿ.ಇನಾಮದಾರ್ ಅವರು 1983 ರಲ್ಲಿ ಜನತಾ ಪಕ್ಷದಿಂದ ಕಿತ್ತೂರು ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಸಲ ಗೆಲುವು ಕಂಡಿದ್ದರು. 1994 ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿ ಇಂದಿನವರೆಗೂ ಇನಾಮದಾರ್ ಅವರು ಕಾಂಗ್ರೆಸ್ನಲ್ಲಿದ್ದರು. ಒಟ್ಟು 9 ಚುನಾವಣೆಗಳನ್ನ ಎದುರಿಸಿ ಐದು ಚುನಾವಣೆಗಳಲ್ಲಿ ಗೆಲುವು ದಾಖಲಿಸಿದ್ದರು. ದೇವರಾಜ ಅರಸ, ಎಸ್.ಎಂ ಕೃಷ್ಣಾ, ಎಸ್. ಬಂಗಾರಪ್ಪ ಅವರ ಸರ್ಕಾರದಲ್ಲಿ ಸಚಿವರಾಗಿದ್ದರು. 1983, 1985 ರಲ್ಲಿ ಜನತಾ ಪಕ್ಷದಿಂದ, 1994, 1999, 2013 ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದ್ದರು.

ರಾಜಕೀಯದ ಮಾಸ್ಟರ್:

ಕಿತ್ತೂರು ರಾಜಕಾರಣದಲ್ಲಿ ಅತ್ಯಂತ ಹಿರಿಯ ಮತ್ತು ಪ್ರಭಾವಿ ರಾಜಕಾರಣಿಗಳಲ್ಲಿ ಇನಾಮದಾರ ಪ್ರಮುಖರು. ಕ್ಷೇತ್ರದ ಮಾಜಿ ಶಾಸಕರಾಗಿರುವ ಬಾಬಾಗೌಡ ಪಾಟೀಲ, ಸುರೇಶ ಮಾರಿಹಾಳ, ಮಹಾಂತೇಶ ದೊಡ್ಡಗೌಡರ, ಬಾಬಾಸಾಹೇಬ ಪಾಟೀಲ ಅವರನ್ನು ಒಳಗೊಂಡಂತೆ ಕ್ಷೇತ್ರದ ಸಾಕಷ್ಟು ಜನಪ್ರತಿನಿಧಿಗಳು ರಾಜಕೀಯದ ಪಟ್ಟುಗಳನ್ನು ಕಲಿತಿದ್ದು ಇದೇ ಧಣಿಗಳ ಗರಡಿಯಲ್ಲಿ. ಕಾಲಾಂತರದಲ್ಲಿ ಆದ ಬದಲಾವಣೆ ವೈ ಮನಸ್ಸುಗಳಿಂದಾಗಿ ಪಕ್ಷ ಬದಲಿಸಿ ಇವರ ವಿರುದ್ದವೇ ಚುನಾವಣೆಗೆ ಸ್ಫರ್ದಿಸಿ ಗೆದ್ದು ಸೋತ ಅನುಭವಗಳನ್ನು ಹೊಂದಿದವರು.  ಸೋತ್ರೂ ಅಷ್ಟೇ ಗೆದ್ರೂ ಅಷ್ಟೇ ದ್ವೇಷದ ರಾಜಕೀಯಕ್ಕೆ ಮುಂದಾಗದ ಇನಾಮದಾರ ತಮ್ಮ ವಿರುದ್ದ ಮಾತಾಡಿದವರನ್ನೂ 'ಅರಾಮದಿ ಯಪ್ಪ' ಅಂತ ಮಾತಾಡಿಸುವ ಅತ್ಯಂತ ವಿನಯಶೀಲ ರಾಜಕಾರಣಿಯಾಗಿದ್ದರು.

ಬಡವರ ಧ್ವನಿ ಅಭಿಮಾನಿಗಳ ಧಣಿ ರಾಜಕೀಯದ ರಾವಸಾಹೇಬ್ ಬೆಂಬಲಿಗರ ಬಾಬಾ... ಹೀಗೆ ಅವರನ್ನು ಅವರ ಅಭಿಮಾನಿಗಳು ಬೆಂಬಲಿಗರು ಕಾರ್ಯಕರ್ತರು ಅನೇಕ ಹೆಸರುಗಳಿಂದ ಕರೆಯುತ್ತಾರೆ. 1983 ರಿಂದ ಸಕ್ರಿಯ ರಾಜಕಾರಣದಲ್ಲಿ ಯಾವ ಕಪ್ಪು ಚುಕ್ಕೆಯೂ ಇರದಂತೆ ಸ್ವಚ್ಛ ರಾಜಕೀಯ ಪಟುವಾಗಿ ಹೆಸರು ಮಾಡಿದ ಬೆರಳೆಣಿಕೆಯ ರಾಜಕಾರಣಿಗಳಲ್ಲಿ ಡಿ.ಬಿ.ಇನಾಮದಾರ ಅಗ್ರಗಣ್ಯರು. 

ಒಟ್ಟು ಒಂಬತ್ತು ಬಾರಿ ನಡೆದ ಚುನಾವಣೆಯಲ್ಲಿ ಆರು ಬಾರಿ ಶಾಸಕರಾಗಿ ಆಯ್ಕೆಯಾದ ಧಣಿಗಳು ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿಂತ ಮೊದಲೇ ಸಚಿವರಾಗಿ ಕಾರ್ಯನಿರ್ವಹಿಸಿದ ಹಿರಿಯ ರಾಜಕಾರಣಿ.

ರಾಜ್ಯದ ಉದ್ದಗಲಕ್ಕೂ ವಿವಿಧ ಖಾತೆಗಳನ್ನು ನಿಭಾಯಿಸಿ ಜಾತಿ ಧರ್ಮ ಮತ ಪಂಥ ಪಂಗಡಗಳ ಚೌಕಟ್ಟನ್ನು ಮೀರಿ ತಮ್ಮ ಅಧಿಕಾರದ ಅವಧಿಯಲ್ಲಿ ಅನೇಕ ಜನಪರ ಕೆಲಸಗಳನ್ನು ಮಾಡುವ ಮೂಲಕ ಪ್ರಭಾವಿ ಮತ್ತು ಪ್ರಬುದ್ದ ರಾಜಕಾರಣಿ ಅಂತಲೇ ಹೆಸರಾಗಿದ್ದವರು.

ಕಳೆದ 2013 ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿ ಕ್ಷೇತ್ರದಲ್ಲಿ ರೈತರ ಜಮೀನುಗಳಿಗೆ ಹೋಗುವ ರಸ್ತೆಗಳು, ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿ, ಕುಡಿಯುವ ನೀರಿನ ಸೌಲಭ್ಯ, ಕಿತ್ತೂರು ತಾಲೂಕು ಕೇಂದ್ರ ಮಾಡಿದ್ದು ಅಲ್ಲದೇ ತಾಲುಕು ಆಡಳಿತಸೌಧ ನಿರ್ಮಾಣ, ಕೆರೆ ತುಂಬಿಸುವ ಕೆಲಸ ಮೊದಲಾದ ಅನೇಕ ಜನಪರ ಕೆಲಸಗಳನ್ನು ಮಾಡಿದ್ದು ಸ್ಮರಣೀಯ.

ಕ್ಷೇತ್ರದಲ್ಲಿ ಅಷ್ಟೇ ಅಲ್ಲದೇ ಬೆಳಗಾವಿ ಜಿಲ್ಲೆಯಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಇವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರೊಂದಿಗೆ ನೇರ ಸಂರ್ಕ ಹೊಂದಿರುವ ಜಿಲ್ಲೆಯ ಏಕೈಕ ಪ್ರಭಾವಿ ರಾಜಕಾರಣಿಯಾಗಿದ್ದರು.

ತಮ್ಮ ಅಧಿಕಾರಾವಧಿಯಲ್ಲಿ ಯಾವುದೇ ಭ್ರಷ್ಟಾಚಾರ,  ಕಮೀಷನ್ ದಂಧೆ ಮಾಡದೇ ಶುದ್ದಹಸ್ತ ಪ್ರಾಮಾಣಿಕ ಜನಸೇವಕರಾಗಿ ಗುರುತಿಸಿಕೊಂಡವರು.ತಿಗಡಿ ಹರಿನಾಲಾ ನಿರ್ಮಾಣದ ಮೂಲಕ ರೈತರ ಪಾಲಿಗೆ ಭಗೀರಥ ರಾಗಿ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರಾದ ಸಂಧರ್ಭದಲ್ಲಿ  ರಾಜ್ಯದ ಎಲ್ಲ ಇಲಾಖೆಗಳಲ್ಲಿ ಗಣಕಯಂತ್ರ ಅಳವಡಿಸಿ, ಮೊಟ್ಟ ಮೊದಲ ಬಾರಿಗೆ ಕಿತ್ತೂರು ಪಟ್ಟಣದಲ್ಲಿ ಎಸ್.ಟಿ.ಡಿ ಬೂತ್ ಗೆ ಚಾಲನೆ ಕೊಟ್ಟ ಹೆಗ್ಗಳಿಕೆ ಡಿ.ಬಿ.ಇನಾಮದಾರ ಅವರಿಗೆ ಸಲ್ಲತಕ್ಕದ್ದು.

ಅಧಿಕಾರಕ್ಕೆ ಜೋತು ಬೀಳದೇ ಸೋತಾಗಲೂ ಸಹ ಕ್ಷೇತ್ರದ ಜನರ ಕಷ್ಟ ನೋವುಗಳಿಗೆ ಸದಾ ಸ್ಪಂದಿಸುವ ಇವರು ಧನದಾಹಿಯಾಗದೇ ಜನರ ಸೇವೆಯೊಂದನ್ನೇ ಗುರಿಯಾಗಿಸಿ ಸುಧಿರ್ಘ ನಾಲ್ಕು ದಶಕಗಳ ಕಾಲ ರಾಜಕೀಯ ರಂಗದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದರು.

ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಆದರ ಗೌರವಗಳನ್ನು ನೀಡಿ 'ಬಾ ಯಪ್ಪ' ಅಂತಲೇ ಸಂಬೋಧಿಸುವ ಇವರ ಸರಳ ನಡೆ ನುಡಿಗೆ ಕ್ಷೇತ್ರದ ಜನ ಇವರ ಬೆಂಬಲವಾಗಿ ನಿಂತಿದ್ದು ಜೀವಂತ ಉದಾಹರಣೆಯಾಗಿದೆ. ಇನಾಮದಾರ ಮನೆತನದ ಕಟ್ಟಾ ಬೆಂಬಲಿಗರ ಪಡೆಯೇ ಕ್ಷೇತ್ರದಾದ್ಯಂತ ನಿರ್ಣಾಯಕರಾಗಿದ್ದು ಕ್ಷೇತ್ರದ ಸೋಲು ಗೆಲುವು ಇವರ ನಿರ್ದಾರದ ಮೇಲೆ ನಿಂತಿದೆ. ಬದಲಾದ ರಾಜಕೀಯ ಕಾಲಘಟ್ಟದಲ್ಲಿ ರಾಜಕೀಯ ರಂಗದಿಂದ ಬೇಸತ್ತ ಇವರು ರಾಜಕೀಯದಿಂದ ವಿಮುಖರಾಗುವ ನರ್ಧಾರ ತೆಗೆದುಕೊಂಡಾಗ ಕ್ಷೇತ್ರದ ಜನ ಬೆಂಬಲಿಸಿ ಸ್ಥಳೀಯ ಮಲಪ್ರಭಾ ಸಕ್ಕರೆ ಕಾರ್ಖಾನೆ ಇವರ ಹೆಗಲಿಗೆ ಹಾಕಿ ಶಾಸಕರಾಗಿ ಆಯ್ಕೆ ಮಾಡಿ ಅಳಿದು ಹೋಗುವ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಕಾರಣರಾಗಿದ್ದರು.

ರಾಯಲ್ ರಾವಸಾಹೇಬ್:

ರಾಯಲ್ ಆಗಿ ಹುಟ್ಟಿ  ರಾಯಲ್ ಆಗಿಯೇ ಬೆಳೆದ ಡಿ.ಬಿ.ಇನಾಮದಾರ ಧಣಿ ರಾಜ್ಯ ರಾಜಕೀಯದಲ್ಲೂ ರಾಯಲ್ ಆಗಿಯೇ ಗುರುತಿಸಿಕೊಂಡವರು. ವಿಧಾನಸೌಧದಲ್ಲೂ ಇವರನ್ನು ಹೆಚ್ಚಾಗಿ ಧಣಿ ಅಂತಲೇ ಕರೆಯುತ್ತಿದ್ದರು.


ಕಿತ್ತೂರು ಸೈನಿಕ ಶಾಲೆಯ ಚೇರಮನ್ ರಾಗಿ ಸೇವೆ ಸಲ್ಲಿಸಿದ ಇನಾಮದಾರ ಅವರು ಹಲವಾರು ದಶಕಗಳ ಕಾಲ ಸಾಮಾಜಿಕ ಹಾಗೂ ರಾಜಕೀಯ ರಂಗದಲ್ಲಿ ಸೇವೆ ಸಲ್ಲಿಸಿ ಅನಾರೋಗ್ಯದ ಕಾರಣ ಇಹಲೋಕ ತ್ಯಜಿಸಿ ಇಂದಿಗೆ ಒಂದು ವರ್ಷ ಕಳೆಯಿತು.

ಇನಾಮದಾರ ಧಣಿಅವರು ರಾಜ್ಯ ರಾಜಕಾರಣದಲ್ಲಿ ಅಜರಾಮರವಾಗಿ ಉಳಿಯಬಲ್ಲ ಹೆಸರಾಗಿದ್ದು ಧಣಿ ಅವರು ಕೇವಲ ವ್ಯಕ್ತಿ ಆಗಿರದೇ ಒಂದು ವ್ಯಕ್ತಿತ್ವವಾಗಿ ಉಳಿದಿರುವುದು ನಾಡಿನ ಹೆಮ್ಮೆಯ ಸಂಗತಿ.  




Post a Comment

0 Comments