ಕೆ. ಶಿವರಾಂ ರವರು IAS ಗಾಗಿ ತಪಸ್ಸು ಮಾಡಿದ ತಪೋಭೂಮಿ. ಇಲ್ಲೇ ಅವರು ಐಎಎಸ್ ಕನಸು ಕಂಡಿದ್ದು

ಕಿತ್ತೂರ ವಿಜಯ 
ಉರುಗನಹಳ್ಳಿ:  ಕೆ. ಶಿವರಾಂ ರವರಿಗೆ ಅವತ್ತಿಗೆ ಇದ್ದ ಬಹುದೂಡ್ಡ ಪರಮ ವೈರಿಗಳೇಂದರೆ ಈ ಗುಡಿಸಲುಗಳು. ಇವರ ಪರಮ ವೈರತ್ವವಿದ್ದುದ್ದು ಬಡತನದ ಮೇಲೆ. ಹಾಗಾಗಿಯೇ ಈ ಎರಡರ ವಿನಾಶದಲ್ಲಿ ಅವರು ಅತ್ಯಂತ ಗಂಭೀರವಾಗಿ ತೂಡಗಿಕೊಂಡರು.


ಬಡವರ ಮನೆಯ ಬೆಳಕಿಗಾಗಿ ಉರಿದ ದೀಪ..ಅದು.

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಕೆ. ಶಿವರಾಂ ರವರನ್ನು ಕುರಿತು ಬರೆದ ವಾಕ್ಯಗಳಲ್ಲಿ 'ನಾನು ಗುಡಿಸಲಿನಿಂದ ಬಂದವನು ಗುಡಿಸಿಲಿನವರಿಗಾಗಿ ಕೆಲಸ ಮಾಡುತ್ತೇನೆ' ಎಂಬ ಅವರ ಮಾತು, ಗುಡಿಸಿಲಿನಿಂದ ಬಂದು ಸಾಧನೆಗೈದ ಪ್ರತಿಯೊಬ್ಬ ಸಾಧಕನು, ಮತ್ತೆ ಗುಡಿಸಿಲಿನತ್ತ ನಡೆದು, ಆ ಗುಡಿಸಲುಗಳನ್ನೆಲ್ಲ ನಿರ್ಣಾಮ ಮಾಡುವ ಚೈತನ್ಯವನ್ನು ತುಂಬುತ್ತದೆ. ಬಹುಶಃ ಕೆ. ಶಿವರಾಂ ರವರಿಗೆ ಅವತ್ತಿಗೆ ಬಹುದೂಡ್ಡ ಪರಮ ವೈರಿಗಳೇಂದರೆ ಈ ಗುಡಿಸಲುಗಳು. ಇವರ ಪರಮ ವೈರತ್ವವಿದ್ದುದ್ದು ಬಡತನದ ಮೇಲೆ. ಹಾಗಾಗಿಯೇ ಈ ಎರಡರ ವಿನಾಶದಲ್ಲಿ ಅವರು ಅತ್ಯಂತ ಗಂಭೀರವಾಗಿ ತೂಡಗಿಕೊಂಡರು.


ಅಂದು ಉರುಗನಹಳ್ಳಿಯಲ್ಲಿ 
ಗಾಢವಾದ ಮೌನ ನನ್ನನ್ನು ಆವರಿಸಿಕೊಂಡಿತ್ತು. ಆ ಊರಿನ ಮಹಿಳೆಯರು ಶೋಕದ ದೀಪಗಳನ್ನು ಹಿಡಿದು, ಕೆ. ಶಿವರಾಂ ರವರ ಮೃತ ದೇಹವನ್ನು ಅತ್ಯಂತ ದುಃಖದಲ್ಲಿ ಸ್ವಾಗತಿಸಿಕೊಳ್ಳುತ್ತಿದ್ದರು. ನಾನು ಅವರ ಮನೆಯನ್ನು ಹುಡುಕುತ್ತಿದ್ದೆ. ಆದರೆ ಅವರ ಮೃತ ದೇಹವು ಶಾಲೆಯೊಂದರ ಆವರಣಕ್ಕೆ ಬಂದು ತಲುಪಿತು. ಆ ಊರಿನಲ್ಲಿ ಅವರು ಮನೆ ಕಟ್ಟುವುದಕ್ಕೂ ಮುಂಚೆಯೇ, ಶಾಲೆಯೊಂದನ್ನು ಕಟ್ಟಿದ್ದರು. ಆ ಊರಿನ ಬಡಮಕ್ಕಳಿಗಾಗಿ ಅವರು, ಅವರ ತಂದೆಯ ಹೆಸರಿನಲ್ಲಿ ಕಟ್ಟಿದ ಶಾಲೆ ಅದು ಎಂದು ಆ ನಂತರ ತಿಳಿಯಿತು...

35 ಕಿಮೀ ಬರಿಗಾಲಲ್ಲಿ ನಡೆದು, ಒಂದೇ ಒಂದು ಕೆಳದರ್ಜೆಯ ಪ್ಯಾಂಟ್, ಒಂದೇ ಶರ್ಟು ನಲ್ಲಿ ಶಾಲೆಗಾಗಿ ಅಲೆದ ಹುಡುಗನೊಬ್ಬ, ಏಕಾಂಗಿ "ವೀರ ಕನ್ನಡಿಗ" ನಾಗಿ ತಾನು ಹುಟ್ಟಿದ ಊರಿನಲ್ಲಿ ಕನ್ನಡ ಶಾಲೆಯೊಂದನ್ನು ತೆರದ "ಲೈಫ್ ಸ್ಟೋರಿ" ಇವತ್ತಿನ ಯುವ ಪೀಳಿಗೆಗೆ ಒಂದು ಹೊಸ ಅಧ್ಯಾಯವನ್ನು ಆರಂಭಿಸಿಬಿಡುತ್ತದೆ....


ಕೆ. ಶಿವರಾಂ ರವರದು ಪೂರ್ಣ ಗುಡಿಸಿಲಿನ ಬದುಕಲ್ಲ. ಅರ್ಧ ಗುಡಿಸಲಿನ ಬದುಕು. ತಮ್ಮ ಸಂಬಂಧಿಕರ ಮನೆಯ ಗೋಡೆಯೊಂದಕ್ಕೆ ಮರದ ತುಂಡುಗಳನ್ನು ಚಾಚಿ ಕಟ್ಟಿದ ಆ ಅರ್ಧ ಗುಡಿಸಿಲೇ ಅವರ ಪೂರ್ಣ ಬದುಕಿಗೆ ಆಶ್ರಯ ನೀಡಿದ್ದು. 

ತಂದೆ ಕೆಂಪಯ್ಯ ಊರೂರು ಅಲೆದು ನಾಟಕ ಕಲಿಸುವ ಮಾಸ್ಟರ್. ಮೂಲತಹ ಕೊಳ್ಳೇಗಾಲದ ಹನೂರು. ಅಬ್ಬಬ್ಬಾ ಅಂದ್ರೆ ಅವರ ಆಸ್ತಿ "ಹಾರ್ಮೋನಿಯಂ" ಅಥವಾ ಅವರ "ರಾಗ" ಮಾತ್ರ. ಅವರು ಗಳಿಸಿದ ಸಂಪತ್ತು ಬಹುಶಃ ಹಳ್ಳಿಯ ಅನಕ್ಷರ ಜನರ ರಂಗಕಲೆ. ನಾಟಕ ಕಲಿಸಿದರೆ ಮಾತ್ರ ಅನ್ನ. ಇಲ್ಲಾ ಅಸಿವು. ಕೆಂಪಯ್ಯ ಮಾಸ್ಟರ್ ಉರೂಗನ ಹಳ್ಳಿಗೆ ನಾಟಕ ಕಲಿಸಲು ಬಂದಾಗ ತಾಯಿ ಚಿಕ್ಕಬೋರಮ್ಮ ಆ ಮಾಸ್ಟರ್ ನ ಕಲೆಗೂ, ಅವನ ರಾಗಕ್ಕೂ, ಅವರ ಬಡತನಕ್ಕೂ, ಒಲಿದು ಬಂದವಳು. ಆನಂತರ ಹೆಂಡತಿ ಮನೆಯಲ್ಲಿಯೇ ಬದುಕು ಆರಂಭ. ತೀರ ಬಡತನ. ಆ ಬಡತನದ ಅರ್ಧ ಗುಡಿಸಿಲಿನಲ್ಲಿಯೇ ಅರಳಿದ ನಕ್ಷತ್ರ 
ಬಡವರ ಕನಸುಗಾರ ಈ ಕೆ. ಶಿವರಾಂ. 

ಈ ಗುಡಿಸಲುಗಳು ಅವರನ್ನು ನಿಕೃಷ್ಟವಾಗಿ ಬಂಧಿಸಿದ್ದವು. ಅವರು ಇಲ್ಲಿಂದ ಬಿಡುಗಡೆ ಬಯಸಿದ್ದರು. ಆ ಗುಡಿಸಲುಗಳೇ, ಅವರಿಗೆ ಬದ್ಧ ವೈರಿಗಳಂತೆ ಕಂಡವೂ. ಅವರು ತಮ್ಮ ಒಂದು ಗುಡಿಸಿಲಿನಿಂದ ಹೊರಬರಲು ಯೋಚಿಸಲಿಲ್ಲ.ಇಂತಹ ಸಾವಿರಾರು ಗುಡಸಲಿನಿಂದ ನನ್ನಂತವರು ಹೊರಬರಬೇಕೆಂದು ಯೋಚಿಸಿದ್ದರು. ನನ್ನ ಗುರಿ ಕೇವಲ ನನ್ನ ಒಂದು ಗುಡಿಸಲಿನ ನಾಶವಲ್ಲ. ಇಂತಹ ‌ಸಾವಿರಾರು ಗುಡಿಸಲುಗಳ ನಾಶ ಎಂದು ಛಲ ತೊಟ್ಟ ನೈಜ "ಛಲವಾದಿ" ಅವರು.

ಆ ಊರಿನ ಜನತೆಯನ್ನು ಮಾತನಾಡಿಸಿದೆ. ಅವರು ಮಾತನಾಡುತ್ತಾ, 'ಮೊದಮೊದಲು ನಮ್ಮ ಗ್ರಾಮ ಅತ್ಯಂತ ಕುಗ್ರಾಮ. ಬರೀ ಗುಡಿಸಿಲುಗಳು. ವಾಸಿಸಲು ಜಾಗವೇ ಇರಲಿಲ್ಲ. ಆದರೆ ಕೆ. ಶಿವರಾಂ ರವರ ಪ್ರತಿಫಲ ಇಂದು ಈ ಕೇರಿಯ ಪ್ರತಿಯೊಂದು ಕುಟುಂಬಕ್ಕೂ 30*60 ಅಡಿ ನಿವೇಶನವುಳ್ಳ ಬಡಾವಣೆ ಇದೆ. ಇಲ್ಲಿ ಸುಸರ್ಜಿತವಾದ ಮನೆಗಳನ್ನು ನಿರ್ಮಿಸಲಾಗಿದೆ. ಮತ್ತು ಇಲ್ಲಿ ಹಗಲವಾದ ರಸ್ತೆ ವ್ಯವಸ್ಥಿತ ಚರಂಡಿ ಸೌಲಭ್ಯಗಳಿವೆ. ಇದೆಲ್ಲವೂ ಆ ಪುಣ್ಯಾತ್ಮನ ಕೊಡುಗೆ ಎಂದರು.

ಕನಿಷ್ಠ ಎರಡು ಎಕರೆ ಜಮೀನಿರುವ ಎಲ್ಲರಿಗೂ ಬೋರ್ವೆಲ್ ಕೊರೆಸಿ ಕೊಟ್ಟಿದ್ದಾರೆ. ಹಾಗೆಯೇ ನೂರಾರು ಜನರಿಗೆ ಉದ್ಯೋಗ ಕೊಡಿಸಿದ್ದಾರೆ. ನಮಗೆ ಅವರೊಂದು ದೊಡ್ಡ ಭರವಸೆಯಾಗಿದ್ದರು. ಯಾವುದೇ ಸಂಕಷ್ಟದ ಕಾಲದಲ್ಲಿ ನಮ್ಮ ಸಾಹೇಬರು ಇದ್ದಾರೆ, ಎಂಬುವ ದೊಡ್ಡ ಭರವಸೆಯೊಂದಿಗೆ ನಾವು ಬದುಕುತ್ತಿದ್ದೇವು. ಆದರೆ ಇಂದು ಅತ್ಯಂತ ನೋವು ಸಂಕಟ ಕಂಬನಿ ನಮ್ಮನ್ನು ಕಾಡುತ್ತಿದೆ. 

ಇಲ್ಲೇ, ಇದೆ ಅವರ ಮನೆ. ಈ ಕೇರಿಯಲ್ಲಿಯೇ, ಇಂತಹ ವಾತಾವರಣದಲ್ಲಿ ಅವರು ಬದುಕಿ ದೊಡ್ಡವರಾದರು. ಇವತ್ತು ನಮ್ಮ ಊರಿನ ಪ್ರತಿಯೊಂದು ಮನೆಗೂ "ಶೋಕ" ಎಂದರು. ನನ್ನೊಳಗಿದ್ದ ಕೆ.ಶಿವರಾಂ ರವರ ಜೊತೆ ನಾನು ಮತ್ತಷ್ಟು ಆತ್ಮೀಯನಾದೆ. ಕಣ್ಣುಗಳು ತುಂಬಿ ಬಂದವು ಮತ್ತೆ ಮೌನಿಯಾದೆ. ಯಾವುದೇ ಉನ್ನತ ಮಟ್ಟಕ್ಕೇರಿದ ಅಧಿಕಾರಿಯೊಬ್ಬ ತನ್ನ ಊರಿನ ಎಲ್ಲಾ ಬಡಕುಟುಂಬಗಳಿಗೂ ಇಂತಹದೊಂದು ಬದುಕು ಕಟ್ಟಿಕೊಡುವ ಮಹತ್ಕಾರ್ಯ ಮಾಡಿದರೆ ಈ ಕಲಿತ ವಿದ್ಯೆ ಸಾಧಿಸಿದ ಸಾಧನೆಗೆ ತ್ಯಾಗ ಎಂದು ಹೆಸರಿಡಬಹುದು. ಬಹುಶಃ ಸಾರ್ಥಕತೆ ಎನ್ನಬಹುದು. ಆದರೆ ಇದು ಎಲ್ಲರಿಗೂ ತುಂಬಾ ಕಷ್ಟವೆನಿಸಿತು. ಇದಕ್ಕೆ ಅಂತ:ಕರಣವಿರಬೇಕು. ಕೆ ಶಿವರಾಂ ರವರನ್ನು ಸಮಾಜ ಅರ್ಥಮಾಡಿಕೊಳ್ಳಬೇಕಾಗಿದ್ದು ಈ ಅಂತ:ಕರಣದ ಕಾರಣಕ್ಕಾಗಿ. ಈ ಕಾಲಘಟ್ಟದಲ್ಲಿ ಇಂತಹದನ್ನೆಲ್ಲ ನಿರೀಕ್ಷಿಸುವುದು ಬಲು ಕಷ್ಟ. ಬಹುಶ ಬಾಬಾ ಸಾಹೇಬರ "ಪೆ ಬ್ಯಾಕ್ ಟು ಸೊಸೈಟಿ" ಕನಸಿಗೆ ಇದು ತಾಜಾ ಉದಾಹರಣೆ ಇರಬೇಕು.

ಆ ಕಾಲಕ್ಕೆ ಸಿದ್ದಲಿಂಗಯ್ಯನವರು, ಕೆ. ಶಿವರಾಂ ರವರು, ಸುಭಾಷ್ ಭರಣಿ ಯವರನ್ನು ಒಂದೇ ವೇದಿಕೆಯಲ್ಲಿ ನೋಡುವುದು ತುಂಬಾ ರೋಮಾಂಚನಕಾರಿ. ಅವತ್ತಿನ ತಲೆಮಾರಿಗೆ ಎಲ್ಲವೂ ಇವರೇ ಆಗಿದ್ದರು. ನಾನು ಮೊಟ್ಟ ಮೊದಲು ಅವರನ್ನು ನೋಡಿದ್ದು ಮಾನಸಗಂಗೋತ್ರಿ 'ಬಯಲು ರಂಗ ಮಂದಿರ' ದಲ್ಲಿ 'ಧರೆಗೆ ದೊಡ್ಡವರು' ಕೃತಿಯ ಬಿಡುಗಡೆಯ ಸಮಾರಂಭದಲ್ಲಿ. ಅಂದು ಕೆ. ಶಿವರಾಂ ರವರು ಮಾತನಾಡುತ್ತಾ 'ವಸಂತ ಕಾವ್ಯ' ಸಿನಿಮಾ ವನ್ನು ಏಕೆ ನೀವು ಸೋಲಿಸಿದ್ರಿ? ಯಾಕೆ ಸಿನಿಮಾ ಚೆನ್ನಾಗಿರಲಿಲ್ವಾ? ಎಂದು ನೆರೆದಿದ್ದ ಜನಕ್ಕೆ ಕೇಳಿದರು. 

ಇದಕ್ಕೂ ಮೊದಲು "ಬಾ ನಲ್ಲೆ ಮಧುಚಂದ್ರಕೆ" ಸಿನಿಮಾ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲ ಅದು. ಅಂದು ಮೈಸೂರಿನ ಸಿನಿಮಾ ಮಂದಿರಗಳ ಮುಂಭಾಗ ರಾರಾಜಿಸುತ್ತಿದ್ದ ಕೆ. ಶಿವರಾಂರವರ ಬಹು ಎತ್ತರದ ಕಟ್ಟೌಗಳು ನನ್ನ ಕಣ್ಣಿಗೆ ಬಿದ್ದವು. ಗಡ್ಡ ದಾರಿಯೊಬ್ಬನ ಬಹು ಎತ್ತರದ ಕಟ್ಟೌಟುಗಳು ನನ್ನನ್ನು ಆಕರ್ಷಿಸಿದವು. ನಾನು ಅದೇ ಮೊದಲ ಬಾರಿಗೆ ಮೈಸೂರಿಗೆ ಬಂದಿದ್ದೆ. ಬಹು ಬಹುದೊಡ್ಡ ಕಟ್ ಔಟ್ ನಲ್ಲಿ ನಿಂತಿದ್ದ ಮನುಷ್ಯನ ಒಳಗಡೆ ಬಹುದೊಡ್ಡ ಕರುಣೆಯೂ ಕಾಣಿಸಿದ್ದು ನನಗೆ ಅರಿವು ಬಂದಾಗ.

ಅಂದಿನ ಜನಪ್ರಿಯ ಸಿನಿಮಾಗಳಲ್ಲಿ ನಮ್ಮ ಕೈಗೆಟುಕ್ಕಿದ್ದು ಶೃಂಗಾರ ಕಾವ್ಯ, ಚೈತ್ರದ ಪ್ರೇಮಾಂಜಲಿ, ಬಾ ನಲ್ಲೆ ಮಧುಚಂದ್ರಕೆ. ಸಿನಿಮಾಗಳು. ಇವತ್ತಿಗೂ ನಾನು ಅತಿ ಹೆಚ್ಚು ಬಾರಿ ಕೇಳಿದ ಹಾಡುಗಳು ಮತ್ತು ಅತಿ ಹೆಚ್ಚು ಬಾರಿ ನೋಡಿದ ಸಿನಿಮಾಗಳು ಈ ಮೂರೆ. ಬಹುಶಃ ನಿಮಗೂ ಈ ಅನುಭವ ಆಗಿರಬಹುದು. ಬಹುಶಃ ಅದೊಂದು ನೈತಿಕ ಬೆಂಬಲವೆನಿಸಿ ನನ್ನೊಳಗೆ ನನಗೆ ಈಗ ಖುಷಿ ಅನಿಸುತ್ತಿದೆ. ಈ ಸಿನಿಮಾಗಳ ಹಾಡಗಳನ್ನು ಇವತ್ತಿಗೂ ಮತ್ತೆ ಮತ್ತೆ ಕೇಳುವುದೆಂದರೆ ಮತ್ತೆ ಮತ್ತೆ ನೈತಿಕ ಬೆಂಬಲ ನೀಡುವುದು ಎಂದೆನಿಸುತ್ತದೆ. ಬೇಕಂತಲೇ ತುಳಿಯಲ್ಪಟ್ಟವರಿಗೆ ನೈತಿಕ ಬೆಂಬಲ ನೀಡುವುದು ಇತಿಹಾಸದ ಪ್ರಜ್ಞೆಯೂ ಕೂಡ.

ಆ ಕಾಲಘಟ್ಟದಲ್ಲ ಶಿವರಾಂ ರವರನ್ನು ಅವರ ಸಮಕಾಲೀನರು ಸಹಿಸಿಕೊಂಡಿರವುದು ಅಸಾಧ್ಯ. ಎಲ್ಲರಂತೆ ಅವರು ಕೂಡ ತಮ್ಮವರಿಂದಲೇ ಮರ್ಮಾಘಾತವನ್ನು ಎದುರಿಸಿದ್ದಾರೆ. ಜಾತಿ ಹಿರಿಮೆಗಳ ಅಂಕುಶಕ್ಕೆ ಸಿಲುಕಿದ್ದಾರೆ. ಅವರ dignified ಬದುಕನ್ನು ಕೆಲವರು 'ಅಹಂಕಾರ' ಎಂದು ಭಾವಿಸಿದ್ದಾರೆ. ಅವರ ಡ್ರೆಸ್ ಕೋಡನ್ನು ನೋಡಿ ಸಹಿಸದೆ ಕೆಲವರು ಹಪಹಪಿಸಿದ್ದಾರೆ. ಜನ ಅವರ ಹೆಸರನ್ನು ಬಡಾವಣೆಯಗಳಿಗೆ, ವೃತ್ತಗಳಿಗೆ, ಆಟೋರಿಕ್ಷಾಗಳಿಗೆ ಬರೆಸಿದಾಗ, ಅವರ ಹುಟ್ಟುಹಬ್ಬದಲ್ಲಿ ವಿಜ್ರಂಭಿಸಿದಾಗ, ಸಹಿಸದೇ ನಿದ್ರೆ ಬಾರದೆ ಹಪಹಪಿಸಿದ ಮಂದಿ ಈ ಸಮಾಜದಲ್ಲಿ ಇದ್ದಾರೆ.

ಅವರು ನಿರ್ಮಿಸಿದಷ್ಟು ಮನೆಗಳ ದಾಖಲೆಯನ್ನು ಸರಿಗಟ್ಪಿರುವ ಮತ್ತೊಬ್ಬ ಅಧಿಕಾರಿ ಇನ್ನೂ ಕಾಣಿಸಿಲ್ಲ. ರಸ್ತೆಗಳಲ್ಲಿ ನಿಂತು, ಬೀದಿಗಳಲ್ಲಿ ನಿಂತು ಫೈಲ್ ಗಳಿಗೆ ಸಹಿ ಮಾಡುವ ಜಿಲ್ಲಾಧಿಕಾರಿಯನ್ನು, ಬೆಳ್ಳಂಬೆಳಗ್ಗೆ ಪೊರಕೆ ಹಿಡಿದು ಕಸ ಬಾಚೂವ ಜಿಲ್ಲಾಧಿಕಾರಿಯನ್ನು, ಜನ ಕಾಣುತ್ತಿಲ್ಲ. ವಿಸ್ತಾರವಾದ ಜಾಗಗಳನ್ನು ಹುಡುಕಿ ಸಾವಿರಾರು ಮನೆಗಳನ್ನು ಏಕಕಾಲದಲ್ಲಿ ನಿರ್ಮಿಸುವ ಅಧಿಕಾರಿಯನ್ನು ಜನ ಈಗ ನೋಡಲು ಸಾಧ್ಯವಿಲ್ಲ.

ಬಡವರ ಮಕ್ಕಳೂ ಕೂಡಾ ವಿಮಾನದಲ್ಲಿ ಹಾರುವ ಕನಸನ್ನು ಕಂಡ ಕೆ ಶಿವರಾಂ ಆರಂಭಿಸಿದ "ಗಗನ ಸಖಿ" ಯರು, ಬಡವರ ಮಕ್ಕಳೂ ಕೂಡ ನರ್ಸ್ ಗಳಾಗಿ ತಮ್ಮ ಬದುಕನ್ನು ಹಸನಾಗಿಸಿಕೊಳ್ಳಬೇಕೆಂಬ ಅವರ ಆಶಯ ಇಂದಿಗೂ ಚರಿತ್ರಾರ್ಹ.

ಕೆ. ಶಿವರಾಂರವರ ಕನ್ನಡ ಸಾಧನೆಯನ್ನು, ಕನ್ನಡದ ಮೊದಲುಗಳ ಇತಿಹಾಸದಿಂದ ಅಳಿಸಲು ಸಾಧ್ಯವೇ ಇಲ್ಲ. ಎಲ್ಲಾ ಮೊದಲುಗಳಿಗೆ ಸುರಿಸಿರುವಷ್ಟು ಬೆವರನ್ನೇ ಕೆ. ಶಿವರಾಂ ರವರು ಕನ್ನಡದ ಮೊದಲ ಐಎಎಸ್ ಮಾಡುವುದಕ್ಕೆ ಸುರಿಸಿರುವುದು ಈಗಾ ಐತಿಹಾಸಿಕ ಗುರುತು.

ನಾಡಿನ ಬಡವರು ಮಾತ್ರ ಅವರ ಅಭಿಮಾನಿಗಳು. ಐಎಎಸ್ ಅಧಿಕಾರಿಯಾಗಿ ಅವರು ಎಲ್ಲಾ ವರ್ಗದ ಜನರಿಗೆ ಸೇವೆ ಸಲ್ಲಿಸಿದ್ದರೂ ಕೂಡಾ, ಕೆಲವು ಯೋಜನೆಗಳು ಭಾರತದ ಇತಿಹಾಸದ ಮೊದಲ ಮೈಲುಗಲ್ಲುಗಳಾಗಿ ಎಲ್ಲಾ ವರ್ಗದ ಜನರನ್ನು ತಲುಪಿದ್ದರೂ ಕೂಡಾ, ನೀವು ದಲಿತ ಕೇರಿಗಳಲ್ಲಿ ಮಾತ್ರ ಅವರ ಕಟೌಟ್ಗಳಿಗೆ ಶ್ರದ್ಧಾಂಜಲಿ ಸಲ್ಲಿಸುವುದನ್ನು ನೋಡುತ್ತಿರುವುದು, ಮತ್ತೆ ಮತ್ತೆ ತಾನು ಜಾತಿಯತೆಯ ಸಾಮ್ರಾಜ್ಯಶಾಹಿ ಎಂಬುವುದನ್ನು ಈ ಸಮಾಜ ಪ್ರಸ್ತುತಪಡಿಸಿದೆ. ಆದರೆ ನಾಡಿನ ಪ್ರತಿ ಹಳ್ಳಿಯ ದಲಿತ ಸಮುದಾಯದ ಜನರು ಅತ್ಯಂತ ಗೌರವಪೂರ್ಣವಾಗಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ, ತಮ್ಮ ಸಮುದಾಯದ ಹೆಮ್ಮೆಯ ಸಂಕೇತವಾಗಿಸಿಕೊಂಡಿದ್ದಾರೆ. ತಮ್ಮ ಮನೆಯಲ್ಲಿ ಕೂಡ ಬಡವರಿಗಾಗಿ ಮನೆ ನಿರ್ಮಾಣ ಮಾಡುವ ಇಂತಹ ಅಧಿಕಾರಿಯೊಬ್ಬ ಜನಿಸಲಿ ಎಂದು ಜಪಿಸಿದ್ದಾರೆ.

ಅವರ ರಾಜಕೀಯ ಆಯ್ಕೆಗಳು ಅವರ ವ್ಯಕ್ತಿತ್ವದ ಮಜಲುಗಳನ್ನು ಕುಂದಿಸಿದರೂ ಕೂಡಾ, ಅವರೊಳಗಿದ್ದ ರಾಜಕೀಯ ಕನಸುಗಳ ಧ್ಯೇಯ ಮತ್ತೊಂದು ಹೊಸತನದ ಆಲೋಚನೆಗೆ ಸಾಕ್ಷಿಯಾಗಿತ್ತು. ಆದರೆ ಅವರು ರಾಜಕೀಯ ಪ್ರಸಂಗಗಳಲ್ಲಿ "ಅನಾಥಾ ಶಿಶು"ವಾಗಿ ಬಲಿಯಾದರು.

ಇತ್ತೀಚಿನ ದುರಂತ ಸಾವುಗಳಲ್ಲಿ ನನ್ನನ್ನು ಅತ್ಯಂತ ಗಾಢವಾಗಿ ಕಾಡಿದ ಸಾವುಗಳೆಂದರೆ ಡಾ. ಸಿದ್ದಲಿಂಗಯ್ಯ,
R ಧೃವನಾರಾಯಣ್, ಮತ್ತು ಕೆ ಶಿವರಾಂ ರವರ ಸಾವುಗಳು

ಪ್ರತಿಯೊಬ್ಬ ಸ್ವಾಭಿಮಾನಿ ದಲಿತನ ಸಾವು ಕೂಡ ಈ ಸಮಾಜಕ್ಕೆ ಒಂದು ಸಂದೇಶವನ್ನೇ ನೀಡುತ್ತಾ ಬಂದಿದೆ. ಆದರೆ ಅದನ್ನು ಅರ್ಥೈಸುವಲ್ಲಿ ಈ ಸಮಾಜ ಸೋತಿದೆ. ಹಾಗಾಗಿ ಇದು ಎಷ್ಟು ದೊಡ್ಡ ಸಮುದಾಯವಾಗಿದ್ದರೂ ಕೂಡಾ "ತಬ್ಬಲಿ ಸಮುದಾಯ" ಎಂಬ ಶೀರ್ಷಿಕೆಗೆ ಅರ್ಹವಾಗಿದೆ. 

ಅವರೊಬ್ಬ ಕನಸುಗಾರರಾಗಿದ್ದರು ಆ ಕನಸುಗಳನ್ನು ಅವರು ತಮ್ಮ "ಛಲವಾದಿ ಸಂಘಟನೆ" ಯ ಮೂಲಕ ಸಾಧಿಸಲು ಹೊರಟಿದ್ದರು. ತನ್ನಂತೆ ಸಾವಿರಾರು ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳನ್ನು ಸೃಷ್ಟಿಸಲು ಹೊರಟಿದ್ದರು. ಈ ನಾಡಿನ ಛಲವಾದಿ ಸಮುದಾಯಕ್ಕೆ ಒಂದು ಸಾಂಸ್ಕೃತಿಕ ಮುನ್ನುಡಿಯನ್ನು ಬರೆಯಲು ಹೊರಟಿದ್ದರು. ಆದರೆ ಆ ಕನಸುಗಳು ಆಗಿಯೇ ಉಳಿದಿವೆ. ಅದನ್ನು ಮುನ್ನಡೆಸುವ ಜವಾಬ್ದಾರಿ ಅವರೊಟ್ಟಿಗೆ ಸಾಗಿ ಬಂದ ಅವರ ಅಪ್ಪಟ ಅನುಯಾಯಿಗಳ ಪಾಲಿಗೆ ಒಂದು ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ.....

ತಮ್ಮ ಮೊದಲ ಸಿನಿಮಾದ ಅಭೂತ ಪೂರ್ವ ಯಶಸ್ಸನ್ನು ಅಂದಿನ ಪತ್ರಿಕೆಗಳು ವಿಷಾದಕರಿಸಿದವು. ಅವರ ಮುಂದಿನ ಸಿನಿಮಾ ಯಶಸ್ಸುನ್ನು ಸಾಧಿಸದಂತೆ ಜನಮಾನಸದಲ್ಲಿ ತಮ್ಮ ವಿಮರ್ಶೆಗಳ ಮೂಲಕ ಅವರ ಬಗ್ಗೆ ಕೆಟ್ಟದ್ದನ್ನು ಬರೆದವು. ಅವಮಾನಿಸಿ ಹೀಯಾಳಿಸಿದವು. ಒಟ್ಟಾರೆ ಅವರು ಗೆಲ್ಲದಂತೆ ನೋಡಿಕೊಂಡವು. ಆದರೆ ಶಿವರಾಂ ರವರು ಒಂದೊಂದು ಸೋಲುಗಳನ್ನು ಭೇದಿಸಿ, ತಾನೊಬ್ಬ ಛಲವಾದಿ ಎಂಬುದನ್ನು ಈ ಸಮಾಜಕ್ಕೆ ತೋರಿಸಿಕೊಟ್ಟು ನಿರ್ಗಮಿಸಿರುವುದು ಮತ್ತಷ್ಟು ಚಲವಾದಿಗಳ ಆಶಾ ಕಿರಣವಾಗಿದೆ.

ಮತ್ತೆ ಈ ನಾಡಿನಲ್ಲಿ ಇನ್ನೊಬ್ಬ ಕೆ. ಶಿವರಾಂ ಜನಿಸಲಾರ. ಹಾಗೆಯೇ ಬಡವರ ಗುಡಿಸಲುಗಳನ್ನು ಬಂಗಲೆಯಾಗಿಸಲಾರ. ಮತ್ತೊಂದು "ಬಾ ನಲ್ಲಿ ಮಧುಚಂದ್ರಕೆ" ಈ ನಾಡಿನಲ್ಲಿ ಬರಲಾರದು....

ಲೇಖನ: ಮಲ್ಕುಂಡಿ ಮಹದೇವಸ್ವಾಮಿ.....

Post a Comment

0 Comments