ಕೂಡಲೇ ತಮಿಳು ಭಾಷೆಯ ಮಾದರಿಯಲ್ಲಿಯೇ ಸ್ವಾಯತ್ತ ಸ್ಥಾನಮಾನವನ್ನು ನೀಡಬೇಕು : ಸಂಸದ ಈರಣ್ಣ ಕಡಾಡಿ
ಬೆಳಗಾವಿ (ಆ.02): ದೇಶದಲ್ಲಿ ಸುಮಾರು 3000 ವರ್ಷಗಳ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆಗೆ ಕೇಂದ್ರ ಸರ್ಕಾರದಿಂದ ಕೂಡಲೇ ತಮಿಳು ಭಾಷೆಯ ಮಾದರಿಯಲ್ಲಿಯೇ ಸ್ವಾಯತ್ತ ಸ್ಥಾನಮಾನವನ್ನು ನೀಡಬೇಕು ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಆಗ್ರಹಿಸಿದ್ದಾರೆ.
ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯಲ್ಲಿ "ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ" ಸ್ವಾಯತ್ತ ಸ್ಥಾನಮಾನವನ್ನು ನೀಡಬೇಕು. ಜೊತೆಗೆ ಕನ್ನಡ ಭಾಷೆಯ ಬೆಳವಣಿಗೆಗೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುಧಾನವನ್ನು ಮೀಸಲಿಡಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಸಂಸತ್ತಿನ ಮುಂಗಾರು ಅಧಿವೇಶನದ ವಿಶೇಷ ವೇಳೆಯಲ್ಲಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಈ ಕುರಿತು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಾತನಾಡಿದ ಅವರು, ಆಚಾರ್ಯ ವಿನೋಬಾ ಭಾವೆ ಅವರು ಕನ್ನಡ ಲಿಪಿಯನ್ನು ‘ವಿಶ್ವದ ಲಿಪಿಗಳ ಮಹಾರಾಣಿ’ ಎಂಬ ಬಿರುದು ನೀಡಿದ್ದರು. ಇಲ್ಲಿಯವರೆಗೆ ಕನ್ನಡ ಭಾಷೆಯ ಸಾಹ್ಯಿತಿಕ ವಿಭಾಗದಲ್ಲಿ 8 ಜ್ಞಾನಪೀಠ ಪ್ರಶಸ್ತಿಗಳು ದೊರೆತಿವೆ. ಕನ್ನಡ ಭಾಷೆಯು ಸುಮಾರು 3000 ವರ್ಷಗಳಿಗಿಂತ ಹೆಚ್ಚು ದೀರ್ಘ ಇತಿಹಾಸವನ್ನು ಹೊಂದಿದ್ದು, 6.5 ಕೋಟಿಗಿಂತ ಹೆಚ್ಚು ಜನ ಕನ್ನಡವನ್ನು ತಮ್ಮ ಮಾತೃ ಭಾಷೆಯಾಗಿ ಮಾತನಾಡುತ್ತಿದ್ದಾರೆ ಮತ್ತು ಕನ್ನಡ ಭಾಷೆ ಭಾರತದ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾಗಿದೆ.
0 Comments