ಮಲಪ್ರಭಾ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿ ಚನ್ನರಾಜ ಹಟ್ಟಿಹೊಳಿ ಅಧಿಕಾರ ಸ್ವೀಕಾರ


 ಕಿತ್ತೂರು ವಿಜಯ ಸುದ್ದಿ ಅಧ್ಯಕ್ಷರಾಗಿ ಚನ್ನರಾಜ ಹಟ್ಟಿಹೊಳಿ ಅವಿರೋಧ ಆಯ್ಕೆ

ಬೆಳಗವಿ: ಮಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿ ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ, ಉಪಾಧ್ಯಕ್ಷರಾಗಿ ಶಿವನಗೌಡ ಪಾಟೀಲ ಅವಿರೋಧವಾಗಿ ಆಯ್ಕೆಯಾದರು.

          ಗುರುವಾರ ಕಾರ್ಖಾನೆ ಕಾರ್ಯಾಲಯದಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಎರಡೂ ಸ್ಥಾನಕ್ಕೆ ಒಂದೊಂದು ನಾಮಪತ್ರಗಳು ಮಾತ್ರ ಸಲ್ಲಿಕೆಯಾಗಿದ್ದರಿಂದ, ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಚುನಾವಣಾಧಿಕಾರಿಗಳಾಗಿ ಪ್ರಭಾವತಿ ಫಕ್ಕೀರಪುರ ಕಾರ್ಯನಿರ್ವಹಿಸಿದರು. ಕಳೆದ ಸೆ.೨೮ರಂದು ಕಾರ್ಖಾನೆ ಆಡಳಿತ ಮಂಡಳಿ ನಿರ್ದೇಶಕರ ೧೫ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ನೇತೃತ್ವದ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ರೈತರ ಪುನಶ್ಚೇತನ ಪೆನಲ್ ಎಲ್ಲ ೧೫ ಜನ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.

       ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಕಾರ್ಖಾನೆ ನೂತನ ಅಧ್ಯಕ್ಷ ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ, ನಷ್ಟದಲ್ಲಿರುವ ಕಾರ್ಖಾನೆ ಪುನಶ್ಚೇತನ ಮಾಡುವುದೊಂದೆ ನಮ್ಮ ಗುರಿ. ಪ್ರಸಕ್ತ ಸಾಲಿನ ಹಂಗಾಮಿನಲ್ಲಿ ೪ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಿ, ಕಾರ್ಖಾನೆ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಈಗಾಗಲೇ ೨೫೦ ಕಬ್ಬು ಕಟಾವು ತಂಡಗಳನ್ನು ಕಾಯ್ದಿರಿಸಿದ್ದೇವೆ. ರೈತರು ಪೂರೈಸುವ ಕಬ್ಬಿಗೆ ಸಮಯಕ್ಕೆ ಸರಿಯಾಗಿ ಯೋಗ್ಯದರ ನೀಡುತ್ತೇವೆಂದು ಭರವಸೆ ನೀಡಿದರು. 

ನಮ್ಮ ಮೇಲೆ ಸವಾಲುಗಳ ಗುಡ್ಡವೇ ಇದೆ. ಎಲ್ಲ ೧೫ ಜನ ನಿರ್ದೇಶಕರು ಸಮಾನರಾಗಿ ಶ್ರಮಿಸುತ್ತೇವೆ. ದೀಪಾವಳಿಗೆ ಕಾರ್ಖಾನೆ ಹಂಗಾಮು ಆರಂಭಿಸುತ್ತೇವೆ. ಕಾರ್ಖಾನೆ ಸಿದ್ಧಗೊಳಿಸಲು ಕಾರ್ಮಿಕರೆಲ್ಲ ಶ್ರಮಿಸುತ್ತಿದ್ದಾರೆಂದರು. 

ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಶಾಸಕರಾದ ಬಾಬಾಸಾಹೇಬ ಪಾಟೀಲ, ವಿಠ್ಠಲ ಹಲಗೇಕರ್ ಮಾರ್ಗದರ್ಶನದಲ್ಲಿ ಕಾರ್ಖಾನೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತೇವೆಂದರು.

       ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಕಾರ್ಖಾನೆ ಉಳಿಸಿ-ಬೆಳೆಸುತ್ತಾರೆಂಬ ನಂಬಿಕೆಯಿಂದ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ರೈತರ ಪುನಶ್ಚೇತನ ಪೆನಲ್‌ಗೆ ರೈತರು ಬೆಂಬಲಿಸಿ, ಎಲ್ಲ ೧೫ ಜನರನ್ನು ಆರಿಸಿ ತಂದಿದ್ದಾರೆ. ರೈತರು ಇಟ್ಟ ನಂಬಿಕೆಗೆ ದ್ರೋಹ ಆಗದಂತೆ ಕಾರ್ಖಾನೆ ಅಭಿವೃದ್ಧಿ ಪಡಿಸುವ ಜವಾಬ್ದಾರಿ ಎಲ್ಲ ೧೫ ಜನ ನಿರ್ದೇಶಕರ ಮೇಲಿದೆ. ಕಾರ್ಖಾನೆ ಅಭಿವೃದ್ಧಿ ಕನಸು ಹೊತ್ತು ಬಂದವರು ಇವರು. ಪಾರದರ್ಶಕ ಆಡಳಿತದ ಮೂಲಕ ನೂತನ ದಿಗ್ದರ್ಶಕ ಮಂಡಳಿ ಕಾರ್ಖಾನೆಗೆ ಮೊದಲಿನ ಗತವೈಭವ ಮರಳಿಸಲಿದೆ ಎಂದರು.

          ಕಾರ್ಖಾನೆ ಉಪಾಧ್ಯಕ್ಷ ಶಿವನಗೌಡ ಪಾಟೀಲ, ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಮೋಹನ ಹಿರೇಮಠ ಮಾತನಾಡಿದರು. ನಿರ್ದೇಶಕರಾದ ಫಕ್ಕೀರಪ್ಪ ಸಕ್ರೆಣ್ಣವರ, ಶಂಕರೆಪ್ಪ ಹೊಳಿ, ಶ್ರೀಕಾಂತ ಇಟಗಿ, ಶಂಕರ ಕಿಲ್ಲೇದಾರ, ಶ್ರೀಶೈಲ ತುರಮರಿ, ರಾಮನಗೌಡ ಪಾಟೀಲ, ರಘು ಪಾಟೀಲ, ಶಿವಪುತ್ರಪ್ಪ ಮರಡಿ, ಸುರೇಶ ಹುಲಿಕಟ್ಟಿ, ಲಲಿತಾ ಪಾಟೀಲ, ಸುನೀತಾ ಲಂಗೋಟಿ, ಬಳಪ್ಪ ಪೂಜಾರ, ಭರಮಪ್ಪ ಶಿಗೆಹಳ್ಳಿ ಹಾಗೂ ರೈತರು, ಕಾರ್ಮಿಕರು, ಅಭಿಮಾನಿಗಳು ಇದ್ದರು. 

ದಿಗ್ದರ್ಶಕ ಮಂಡಳಿಯ ಎಲ್ಲರನ್ನೂ ವೇದಿಕೆಯಲ್ಲಿ ಸನ್ಮಾನಿಸಲಾಯಿತು..

Post a Comment

0 Comments