ಕಾನ್ಪುರ: ಭಾರತ-ಬಾಂಗ್ಲಾದೇಶ ನಡುವಿನ 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟ ಮಳೆಗೆ ಬಲಿಯಾಯಿತು. ನಗರದಲ್ಲಿ ಬೆಳಗ್ಗಿನಿಂದಲೇ ತುಂತುರು ಮಳೆ ಬೀಳುತ್ತಿದ್ದ ಕಾರಣ, ದಿನದಾಟ ಆರಂಭಗೊಳ್ಳುವುದು ವಿಳಂಬವಾಯಿತು. ಆಟ ಆರಂಭಗೊಳ್ಳಬಹುದು ಎನ್ನುವ ನಿರೀಕ್ಷೆಯೊಂದಿಗೆ ಕ್ರೀಡಾಂಗಣಕ್ಕೆ ಆಗಮಿಸಿದ ಉಭಯ ತಂಡಗಳ ಆಟಗಾರರಿಗೆ ನಿರಾಸೆ ಉಂಟಾಯಿತು.
ಸುಮಾರು 10 ಗಂಟೆಯ ವೇಳೆಗೆ ಮಳೆ ಜೋರಾದ ಕಾರಣ, 10.40ರ ವೇಳೆಗೆ ಆಟಗಾರರು ಹೋಟೆಲ್‌ಗೆ ವಾಪಸಾದರು. ಆ ಬಳಿಕ ಮಳೆ ಕಡಿಮೆಯಾದ ಕಾರಣ, ಬೆಳಗ್ಗೆ 11.15ರ ವೇಳಗೆ ಮೈದಾನ ಸಿಬ್ಬಂದಿ ಮೂರು ಸೂಪರ್ ಸಾಪರ್ ಯಂತ್ರಗಳನ್ನು ಬಳಸಿ ಮೈದಾನ ಒಣಗಿಸುವ ಕೆಲಸ ಆರಂಭಿಸಿದರು. ಆದರೂ ಸಣ್ಣಗೆ ಮಳೆ ಬೀಳುತ್ತಲೇ ಇದ್ದಿದ್ದರಿಂದ ಹಾಗೂ ಮಂದ ಬೆಳಕು ಇದ್ದ ಕಾರಣ ಮಧ್ಯಾಹ್ನ 2.15 ರ ವೇಳೆಗೆ ಅಂಪೈರ್‌ಗಳು ದಿನದಾಟವನ್ನು ರದ್ದುಗೊಳಿಸಲು ನಿರ್ಧರಿಸಿದರು.
3 ದಿನದಲ್ಲಿ ಗೆಲ್ಲಬೇಕಾದ ಒತ್ತಡ: 3ನೇ ದಿನವಾದ ಭಾನುವಾರವೂ ಮಳೆ ಮುನ್ಸೂಚನೆ ಇದ್ದು, ಪಂದ್ಯ ಡ್ರಾನತ್ತ ಹೊರಳಬಹುದು ಎನ್ನುವ ಆತಂಕ ಭಾರತೀಯರಿಗೆ ಶುರುವಾಗಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ಜೊತೆಗೆ ಸತತ 3ನೇ ಬಾರಿಗೆ ಫೈನಲ್‌ಗೇರುವ ಗುರಿ ಹೊಂದಿರುವ ಭಾರತಕ್ಕೆ ಮುಂದಿನ ಮೂರುವರೆ ತಿಂಗಳ ಕಾಲ ನಡೆಯಲಿರುವ ಪಂದ್ಯಗಳು ಅತ್ಯಂತ ಮಹತ್ವದೆನಿಸಿವೆ.
)
0 Comments