ಮೃತ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರಿಗೆ ಶಾಸಕ ಬಾಬಾಸಾಹೇಬ ಪಾಟೀಲ ಹಾಗೂ ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ ಸಂತಾಪ ಸೂಚಿಸಿದ್ದಾರೆ.

ಎಂ. ಕೆ. ವಾಣಿ ನ್ಯೂಸ್ 
ಬೆಂಗಳೂರು: ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಹಾಲಿ ಶಾಸಕ ರಾಜಾ ವೆಂಕಟಪ್ಪ ನಾಯಕ (67) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ರಾಜಾ ವೆಂಕಟಪ್ಪ ನಾಯಕ ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕಳೆದ 29 ದಿನಗಳ ಹಿಂದೆ ಹೃದಯಾಘಾತ ಸಂಭವಿಸಿದ ಕಾರಣ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜಾ ವೆಂಕಟಪ್ಪ ನಾಯಕ ಅವರು ನಾಲ್ಕು ಬಾರಿ ಸುರಪುರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದು 1994ರಲ್ಲಿ ಕರ್ನಾಟಕ ಕಾಂಗ್ರೆಸ್ ಪಾರ್ಟಿ (ಕೆಸಿಪಿ) ಯಿಂದ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದ್ದರು. 1999, 2013 ಹಾಗೂ 2023ರಲ್ಲಿ ಅವರು ಶಾಸಕರಾಗಿ ಆಯ್ಕೆಯಾಗಿದ್ದರು.

ಸುರಪುರ ಪರಿಶಿಷ್ಟ ಪಂಗಡ(ಎಸ್‍ಟಿ) ಮೀಸಲು ಕ್ಷೇತ್ರದಿಂದ ಬಿಜೆಪಿಯ ರಾಜುಗೌಡ ಅವರನ್ನು ರಾಜಾ ವೆಂಕಟಪ್ಪ ನಾಯಕ ಮಣಿಸಿದ್ದರು. ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಅವರಿಗೆ ಕೆಲದಿನಗಳ ಹಿಂದೆಯೆಷ್ಟೇ ಕರ್ನಾಟಕ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ ನೀಡಲಾಗಿತ್ತು, ಅವರು ಅಧ್ಯಕ್ಷರಾಗಿಯೂ ಅಧಿಕಾರ ಸ್ವೀಕರಿಸಿದ್ದರು.

ಮೃತ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರಿಗೆ ಚನ್ನಮ್ಮ ಕಿತ್ತೂರು ಶಾಸಕ
ಬಾಬಾಸಾಹೇಬ ಪಾಟೀಲ ಹಾಗೂ ಕೆಪಿಸಿಸಿ ಸದಸ್ಯೆ ರೋಹಿಣಿ ಸಂತಾಪ ಸೂಚಿಸಿದ್ದಾರೆ.

Post a Comment

0 Comments