*ಬಿಜೆಪಿಯ ಇಬ್ಬರು ರೆಬಲ್ಸ್ ಶಾಸಕರು! ಕಾರಣ ಏನು*
ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬೆನ್ನಲ್ಲೇ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರ ನಿವಾಸಕ್ಕೆ ಬಿಜೆಪಿಯ ಇಬ್ಬರು ಶಾಸಕರು ದಿಢೀರ್ ಭೇಟಿ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.
ಗುರುವಾರ ಸದಾಶಿವನಗರದಲ್ಲಿರುವ ಡಾ.ಜಿ ಪರಮೇಶ್ವರ್ ನಿವಾಸಕ್ಕೆ ಆಗಮಿಸಿದ ಬಿಜೆಪಿಯ ರೆಬಲ್ಸ್ ಶಾಸಕರಾದ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಕೆಲಹೊತ್ತು ಮಾತುಕತೆ ನಡೆಸಿದರು. ಉಭಯ ಶಾಸಕರ ಈ ಭೇಟಿ ಹಾಗೂ ಮಾತುಕತೆ ಸಹಜವಾಗಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಇದೊಂದು ವೈಯಕ್ತಿಕ ನೆಲೆಯ ಭೇಟಿ ಹಾಗೂ ಕ್ಷೇತ್ರದ ವಿಚಾರವಾಗಿ ನಡೆಸಿದ ಮಾತುಕತೆ ಎಂದು ಹೇಳುತ್ತಿದ್ದರೂ ಸದ್ಯದಲ್ಲಿ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆ ಹಾಗೂ ರೆಬಲ್ಸ್ ಶಾಸಕರು ಪಕ್ಷ ತೊರೆಯುತ್ತಾರೆ ಎಂಬ ಚರ್ಚೆಯ ಹಿನ್ನೆಲೆಯಲ್ಲಿ ಸಹಜವಾಗಿ ಈ ಭೇಟಿ ಮತ್ತು ಮಾತುಕತೆ ಗಮನ ಸೆಳೆಯುತ್ತಿವೆ.
ಬಿಜೆಪಿಯಲ್ಲಿದ್ದರೂ ಎಸ್‌ಟಿ ಸೋಮಶೇಖರ್ ಇತ್ತೀಚೆಗೆ ಸಕ್ರಿಯವಾಗಿ ಪಕ್ಷದ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಶಿವರಾಂ ಹೆಬ್ಬಾರ್ ಕೂಡಾ ಅಷ್ಟೇನು ಪೂರ್ಣ ಪ್ರಮಾಣದಲ್ಲಿ ಪಕ್ಷದ ಕೆಲಸ ಕಾರ್ಯಗಳಲ್ಲಿ ಗುರುತಿಸಿಕೊಳ್ಳುತ್ತಿಲ್ಲ. ಸದನದಲ್ಲೂ ರೆಬಲ್ಸ್ ಶಾಸಕರ ನಡೆ ಚರ್ಚೆಗೆ ಗ್ರಾಸವಾಗಿತ್ತು. ಈ ನಿಟ್ಟಿನಲ್ಲಿ ಇವರಿಬ್ಬರ ಭೇಟಿ ಅನುಮಾನಗಳಿಗೆ ಹಾಗೂ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಗೃಹ ಸಚಿವರ ಭೇಟಿ ಬಳಿಕ ಶಾಸಕ ಎಸ್.ಟಿ.ಸೋಮಶೇಖರ್ ಮಾತನಾಡಿ, ನನ್ನ ಕ್ಷೇತ್ರದ ಮಾಗಡಿ ರಸ್ತೆಗೆ ಹೊಸ ಪೊಲೀಸ್ ಠಾಣೆ ಬೇಕಾಗಿದೆ. ಅಂದ್ರಹಳ್ಳಿ ಬ್ಯಾಡರಹಳ್ಳಿ ವಿಭಜನೆ ಆಗಬೇಕು. ಈ ವಿಚಾರವಾಗಿ ಗೃಹ ಸಚಿವರನ್ನ ಭೇಟಿಯಾಗಿದ್ದೆ ಎಂದರು.
ಇನ್ನು ಬಿಜೆಪಿಯಲ್ಲಿ ಸದ್ಯ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಸಂಸದ ಡಿ.ವಿ.ಸದಾನಂದಗೌಡ ಸರಿಯಾಗಿಯೇ ಹೇಳಿದ್ದಾರೆ. ಯಾರು ಪಕ್ಷ ವಿರುದ್ದವಾಗಿ ನಡೆದುಕೊಳ್ಳುತ್ತಾರೋ ಅವರ ಮೇಲೆ ಕ್ರಮ ಆಗಲಿ ಎಂದು ಆಗ್ರಹಿಸಿದರು.
ನಾವೇನಾದ್ರು ಪಕ್ಷ ವಿರೋಧಿ ಚಟುವಟಿಕೆ ಮಾಡ್ತಿದ್ದೀವಾ? ಬಿಜೆಪಿಯಲ್ಲಿ ಹೇಳೋರು ಕೇಳುವವರು ಇಲ್ಲ ಎಂಬುವುದು ತಪ್ಪು. ವಿಜಯೇಂದ್ರ ಅಧ್ಯಕ್ಷರಾಗಿದ್ದಾರೆ. ಅಶೋಕ್ ವಿಪಕ್ಷ ನಾಯಕರಾಗಿದ್ದಾರೆ. ಪಕ್ಷದಲ್ಲಿ ಒಳ್ಳೆ ಕಮಿಟಿ ಮಾಡಿದ್ದಾರೆ. ರಾಷ್ಟ್ರೀಯ ಪಕ್ಷ ಬಿಜೆಪಿಯನ್ನು ದಿನದಿಂದ ದಿನಕ್ಕೆ ಸರಿ ಮಾಡುತ್ತಿದ್ದಾರೆ ಎಂದರು
0 Comments