Belagavi : ಗೃಹಲಕ್ಷ್ಮಿ ಅರ್ಜಿಗೆ 250 ರೂ ವಸೂಲಿ!: ಲಾಗಿನ್ ಐಡಿ ದುರ್ಬಳಕೆ ಮಾಡಿದ ಇಬ್ಬರ ವಿರುದ್ಧ ದೂರು ದಾಖಲು

ಬೆಳಗಾವಿ: ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ನೋಂದಣಿಗಾಗಿ ಗ್ರಾಮ ಒನ್ ಕೇಂದ್ರದ ಲಾಗಿನ್ ಐಡಿ ದರ್ಬಳಕೆ ಮಾಡಿಕೊಂಡು ಸಾರ್ವಜನಿಕರಿಂದ ಹಣ ವಸೂಲಿ ಮಾಡಿರುವುದಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.


ಬೆಳಗಾವಿ ನಗರದ ಚವಾಟಗಲ್ಲಿಯಲ್ಲಿ ಜನತಾ ಆನ್ ಲೈನ್ ಸೆಂಟರ್ ನಡೆಸುತ್ತಿರುವ ಅದೃಶ್ ಆರ್.ಟಿ. ಹಾಗೂ
ಮುತಗಾ ಗ್ರಾಮ ಒನ್ ಕೇಂದ್ರದ ಕಿರಣ ಚೌಗಲಾ ಎಂಬುವರ ವಿರುದ್ಧ ಬೆಳಗಾವಿ ನಗರದ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿರುತ್ತದೆ.

ಚವಾಟಗಲ್ಲಿಯ ಜನತಾ ಆನ್ ಲೈನ್ ಕೇಂದ್ರದಲ್ಲಿ ಗೃಹಲಕ್ಷ್ಮೀ ಫಲಾನುಭವಿಗಳ ನೋಂದಣಿಗೆ ಹಣ ಪಡೆಯಲಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ ಗುರುವಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮತ್ತು ತಹಸೀಲ್ದಾರರ ನೇತೃತ್ವದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕಂಪ್ಯೂಟರ್‌ ಕೇಂದ್ರದ ಮಾಲೀಕ ಅರ್ಜಿ ಸಲ್ಲಿಸಲು ಆಗಮಿಸಿದ್ದ ಅರ್ಜಿದಾರರಿಂದ ಪ್ರತಿ ಅರ್ಜಿಗೆ 250 ರೂ. ಹಣ ವಸೂಲಿ ಮಾಡುತ್ತಿರುವುದು ಕಂಡು ಬಂದಿದೆ. ಅರ್ಜಿ ಸ್ವೀಕೃತಿ ನಮೂನೆ ಮೇಲೆ 250 ರೂ. ಎಂದು ಬರೆದಿರುವ 25ಕ್ಕೂ ಅಧಿಕ ದಾಖಲೆಗಳು ಲಭ್ಯವಾಗಿವೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಆರ್.ನಾಗರಾಜ್, ಬೆಳಗಾವಿ ತಹಶಿಲ್ದಾರ ಸಿದ್ದರಾಯ ಬೋಸಗಿ ಹಾಗೂ ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಜಂತ್ರಿ ಅವರು ಜನತಾ ಆನ್ ಲೈನ್ ಕೇಂದ್ರದ ಮೇಲೆ ದಾಳಿ ನಡೆಸಿ ಅಕ್ರಮವನ್ನು ಪತ್ತೆ ಮಾಡಿದ್ದರು.

ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ನೋಂದಣಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆಸಿರುವ ಮುತಗಾ ಗ್ರಾಮ ಒನ್ ಕೇಂದ್ರದ ಪರವಾನಗಿ ಕೂಡ ರದ್ದು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

Post a Comment

0 Comments