ಪುಸ್ತಕ ಕೊಂಡು ಓದಿ ಕನ್ನಡ ಭಾಷೆಯನ್ನು ಬೆಳೆಸುವುದು ಅವಶ್ಯಕವಾಗಿದೆ; ಮೆಹಬೂಬ ಮುಲ್ತಾನಿ

                        ಸಾಹಿತಿ ಹಾಗೂ ಶಿಕ್ಷಕ ದಂಪತಿಗಳನ್ನ ಗೌರವಿಸಿ ಸನ್ಮಾನಿಸುತ್ತಿರುವ ಕಿತ್ತೂರು ಕಸಾಪ

ಚನ್ನಮ್ಮನ ಕಿತ್ತೂರು: ಕನ್ನಡಿಗರಾದ ನಾವುಗಳು ಕನ್ನಡ ಭಾಷೆಯ ಬಗೆಗೆ ಹೆಮ್ಮೆ ಪಟ್ಟು ಅದನ್ನು ಉಳಿಸಿ ಬೆಳೆಸಲು ಕ್ರಿಯಾಶೀಲರಾಗಬೇಕು ಎಂದು ಚನ್ನಮ್ಮನ ಕಿತ್ತೂರ ಸರಕಾರಿ ಉರ್ದು ಪ್ರೌಢ ಶಾಲೆಯ ಆಂಗ್ಲ ಭಾಷಾ ಶಿಕ್ಷಕರು, ಯುವ ಸಾಹಿತಿಗಳಾದ ಮೆಹಬೂಬ ಮುಲ್ತಾನಿ ಹೇಳಿದರು.

ಕಿತ್ತೂರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಘಟಕ ವತಿಯಿಂದ  ಒಲುಮೆಮನೆಯಲ್ಲಿ  ಹಮ್ಮಿಕೊಂಡ ಸಾಹಿತಿಗಳ ಸನ್ಮಾನ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡುತ್ತಾ ನನ್ನ ಭಾಷೆ ಉರ್ದು, ನಾನು ಕಲಿಸುವ ವಿಷಯ ಇಂಗ್ಲೀಷ್.ಆದರೂ ಹೆಚ್ಚು ಪ್ರೀತಿಸುವ ಬಾಷೆ ಕನ್ನಡ ಎಂದು ಹೇಳಿಕೊಳ್ಳಲು ಅಭಿಮಾನವೆನಿಸುತ್ತದೆ ಎಂದು ಸಂತಸ ಪಡುತ್ತ ಇಂದಿನ ವಿದ್ಯಮಾನಗಳನ್ನು ಗಮನಿಸಿದರೆ ಮುಂದೊಂದು ದಿನ ಕನ್ನಡ ಭಾಷೆ ಕೇವಲ ಹಿರಿಯರ ಭಾಷೆಯಾಗಿಯೇ ಉಳಿಯುತ್ತದೆಯೆನೋ ಎಂಬ ಕಳವಳ ವ್ಯಕ್ತ ಪಡಿಸುತ್ತ ನಾವು ಇಂದಿನಿಂದಲೇ ಕನ್ನಡ ಬೆಳೆಸುವ, ಕನ್ನಡ ಪುಸ್ತಕಗಳನ್ನು ಕೊಂಡು  ಓದುವ ಹವಾಸಗಳನ್ನು ಮಕ್ಕಳಲ್ಲಿ ಬೆಳೆಸುವಂತಾಗಬೇಕೆಂದು ಮನವಿ ಮಾಡಿದರು. ಸ್ಪೋಕನ್ ಇಂಗ್ಲೀಷ್ ಹಾಗೆಯೇ ಉರ್ದು ವಿದ್ಯಾರ್ಥಿಗಳಿಗೆ ಸ್ಪೋಕನ್ ಕನ್ನಡ ಕಾರ್ಯಕ್ರಮ ನಡೆಸುವ ಯೋಜನೆ ರೂಪಿಸಿರುವದಾಗಿ ತಿಳಿಸಿದರು.

ಮತ್ತೋರ್ವ ಸಾಹಿತಿಯೂ, ಕವಿಯತ್ರಿಯೂ, ಅನೇಕ ಸಾಹಿತ್ಯಿಕ ಪ್ರಶಸ್ತಿಗಳಿಗೆ ಭಾಜನರಾದ  ಹಿರೇನಂದಿಹಳ್ಳಿ ಸರಕಾರಿ ಪ್ರೌಢ ಶಾಲೆಯ ಗಣಿತ ಶಿಕ್ಷಕಿ ಭುವನಾ ಹಿರೇಮಠ  ಸನ್ಮಾನ ಸ್ವೀಕರಿಸಿ ನಮ್ಮ ಮಕ್ಕಳಲ್ಲಿ ಕನ್ನಡ ಭಾಷೆಯ ಬಗೆಗೆ ಒಲವು ಇದೆ.ಆದರೆ ಪಾಲಕರು ಮತ್ತು ಪ್ರಸ್ತುತ ಸನ್ನಿವೇಶಗಳು ಅವರನ್ನು ಅನ್ಯ ಭಾಷೆಗಳತ್ತ ಕೊಂಡುಯ್ಯುತ್ತಿವೆ ಎಂದು ಬೇಸರ ವ್ಯಕ್ತ ಪಡಿಸಿದರು. ಆದರೂ ಸಹಿತ ನಾವುಗಳು ಕಲಿಸುವಿಕೆಯ ಜೊತೆಗೆ ಬರವಣಿಗೆಯತ್ತ ಗಮನ ಹರಿಸಿದರೆ ಕನ್ನಡ ಭಾಷೆ ಇನ್ನೂ ಮೇಲೆತ್ತರಕ್ಕೆ ವಿಕಸಿಸುತ್ತದೆ ಎಂದು ತಿಳಿಸಿದರು.  

ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಆಧ್ಯಕ್ಷ ಡಾ.ಎಸ್.ಬಿ.ದಳವಾಯಿ ಸಮಾರೋಪ ನುಡಿಗಳಲ್ಲಿ ಅಂದು ಪುಸ್ತಕ ಬರೆಯುವವರ ಸಂಖ್ಯೆ ಕಡಿಮೆ ಇದ್ದರೆ  ಓದುವವರ ಸಂಖ್ಯೆ ಹೆಚ್ಚು ಇತ್ತು.ವಿಪರ್ಯಾಸವೆಂದರೆ ಇಂದು ಪುಸ್ತಕ ಬರೆಯುವವರ ಸಂಖ್ಯೆ ಹೆಚ್ಚಾಗಿದ್ದು ಓದುವವರ ಸಂಖ್ಯೆ ಬಹಳ ವಿರಳವಾಗಿದೆ ಎನ್ನುತ್ತಾ ಸರಕಾರ ಮತ್ತು ಕನ್ನಡ ಪರ ಸಂಘಟನೆಗಳು ಕನ್ನಡ ಭಾಷೆಯ ಬೆಳವಣಿಗೆಯತ್ತ ಗಮನ ಹರಿಸಬೇಕು ಎಂದು ಮನವಿ ಮಾಡಿದರು.                                                        ರಾಜೇಶ್ವರಿ ಕಳಸಣ್ಣವರ ಪ್ರಾರ್ಥಿಸಿದರು. ಮಂಜುನಾಥ ಕಳಸಣ್ಣವರ ಪ್ರಸ್ತಾವಿಕ ಮಾತುಗಳನ್ನು ಆಡುತ್ತಾ ಸಾಧಕರಿಬ್ಬರ ಪರಿಚಯ ಮಾಡಿದರು. ಮಹೇಶ್ವರ ಹೊಂಗಲ ವಂದಿಸಿದರು. ಎಂ.ಪಿ.ಕದಮ ನಿರೂಪಿಸಿದರು.

 ಬಸವರಾಜ ಬಿದರಿ , ರಾಘವೇಂದ್ರ, ರಾಜಶೇಖರ ರಗಟಿ, ಪ್ರಭಾವತಿ ಲದ್ದೀಮಠ,ಬಸವರಾಜ ಆಸಂಗಿಮಠ, ಸೇರಿದಂತೆ ಇತರರು ಇದ್ದರು.


Post a Comment

0 Comments