ಶಿವಾಜಿ ಮಹಾರಾಜರ ಶೌರ್ಯ, ಸಾಹಸ, ರಾಷ್ಟ್ರಭಕ್ತಿ ಎಲ್ಲರಿಗೂ ಪ್ರೇರಣೆದಾಯಕ: ಪಿ.ಜಿ ಕೆಂಪಣ್ಣವರ

ಎಂ.ಕೆ. ವಾಣಿ ನ್ಯೂಸ್
ಬೆಳಗಾವಿ: ಛತ್ರಪತಿ ಶಿವಾಜಿ ಮಹಾರಾಜರು ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿ ಹಿಂದೂಸ್ಥಾನವನ್ನು ಒಗ್ಗೂಡಿಸಲು ಬಹುವಾಗಿ ಶ್ರಮಿಸಿದ್ದಾರೆ. ಸುಮಾರು 3 ಸಾವಿರ ಕೋಟೆಗಳನ್ನು ಗೆದ್ದು ಕ್ರಮೇಣ ಇಡೀ ಪಶ್ಚಿಮ ಭಾರತವನ್ನು ತಮ್ಮ ಆಳ್ವಿಕೆಗೆ ತಂದರು. ಶಿವಾಜಿಯ ಶೌರ್ಯ, ಸಾಹಸ, ರಾಷ್ಟ್ರಭಕ್ತಿ, ಆಡಳಿತ ಎಂದೆಂದಿಗೂ ಪ್ರೇರಣೆದಾಯಕ ಎಂದು ಬೆಳಗಾವಿ ರಾಜಾ ಲಾಖಮಗೌಡ ಕಾನೂನು ಮಹಾವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾದ ಪಿ.ಜಿ ಕೆಂಪಣ್ಣವರ. ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ಶಿವಾಜಿ ಉದ್ಯಾನವನದಲ್ಲಿ
ಸೋಮವಾರ ನಡೆದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಹಿಂದೂಗಳಲ್ಲಿ ಜನ ಜಾಗೃತಿ ಮೂಡಿಸಿ, ಹಿಂದೂಸ್ಥಾನದ ಏಕತೆಗೆ ಶ್ರಮಿಸಿದ ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆ ಅಪಾರ. ಶಿವಾಜಿ ಮಹಾರಾಜರ ಪೂರ್ವಜರು ಮೂಲತಃ ಕರ್ನಾಟಕ ರಾಜ್ಯದವರಾಗಿದ್ದಾರೆ. ಮನಸಿದ್ದರೆ ಮಾರ್ಗ ಎಂಬ ಸಂದೇಶ ಸಾರಿದ ಶಿವಾಜಿ ಮಹಾರಾಜರು ಅವರ ತಾಯಿಯ ಆಶಯದಂತೆ ಹಿಂದೂ ಸಾಮ್ರಾಜ್ಯ ಕಟ್ಟಿ, ಸಂರಕ್ಷಣೆ ಮಾಡಿದ್ದಾರೆ.

ತಂದೆ ತಾಯಿಯ ಮಾರ್ಗದರ್ಶನದಲ್ಲಿ ನಡೆದ ಶಿವಾಜಿ ಮಹಾರಾಜರು ದೇಶದಲ್ಲಿ ಆಗುತ್ತಿರುವ ಮೊಘಲ್ ದಾಳಿಗಳನ್ನು ತಪ್ಪಿಸಿ ಮೊಗಲ್ ಸಾಮ್ರಾಜ್ಯದ ವಿರುದ್ಧ ಹೋರಾಡಿ, ದೇಶದಲ್ಲಿ ತನ್ನದೇಯಾದ ಸಾಮ್ರಾಜ್ಯ ಸ್ಥಾಪಿಸುವ ಮೂಲಕ ಹಿಂದೂ ಸಾಮ್ರಾಜ್ಯದ ಕೀರ್ತಿ ಪತಾಕೆ ಹಾರಿಸಿದ್ದಾರೆ ಎಂದು ಪ್ರಾಧ್ಯಾಪಕರಾದ ಪಿ.ಜಿ ಕೆಂಪಣ್ಣವರ ಅವರು ಉಪನ್ಯಾಸದಲ್ಲಿ ತಿಳಿಸಿದರು. 

ಮಹಾನಗರ ಪಾಲಿಕೆ ಮೇಯರ್ ಸವಿತಾ ಕಾಂಬಳೆ, ಉಪ ಮೇಯರ್ ಆನಂದ ಚವ್ಹಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಪಾಲಿಕೆ ಸದಸ್ಯ ರಾಜು ಭಾತಖಾಂಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅಂಜಲಿ ಪಾಟೀಲ ವಂದಿಸಿದರು. ಆಶಾ ಯಮಕನಮರಡಿ ನಿರೂಪಿಸಿದರು.

Post a Comment

0 Comments