ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ಕುಡಿಯುವ ನೀರು ಕೊರತೆಯಾಗದಂತೆ ಕ್ರಮ; ಅಂಜುಂ ಪರ್ವೇಜ್ ಸೂಚನೆ

ಎಂ. ಕೆ. ವಾಣಿ ನ್ಯೂಸ್ 
ಬೆಳಗಾವಿ: ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿ ಯಾವುದೇ ಗ್ರಾಮಗಳಲ್ಲಿ ನೀರಿನ ಕೊರತೆ ಎದುರಾಗಬಾರದು. ಕುಡಿಯುವ ನೀರಿನ ಕೊರತೆ ಉಂಟಾಗಬಹುದಾದ ಗ್ರಾಮಗಳ ಪಟ್ಟಿಯನ್ನು ಮುಂಚಿತವಾಗಿ ಸಿದ್ಧಪಡಿಸಿಟ್ಟುಕೊಂಡು ಕುಡಿಯುವ ನೀರು ಪೂರೈಕೆಗೆ ಖಾಸಗಿ ಕೊಳವೆಬಾವಿ ಸೇರಿದಂತೆ ಲಭ್ಯ ಜಲಮೂಲಗಳನ್ನು ಮುಂಚಿತವಾಗಿ ಗುರುತಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಬರ ನಿರ್ವಹಣೆ ಹಾಗೂ ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಳೆ ಕಡಿಮೆಯಾಗಿರುವುದರಿಂದ‌ ಕುಡಿಯುವ ನೀರಿನ‌ ಸಮಸ್ಯೆ ಉದ್ಭವಿಸದಂತೆ ಮುಂಜಾಗ್ರತಾ ಕ್ರಮಗಳನ್ಙು ತೆಗೆದುಕೊಳ್ಳಬೇಕು.
ಗ್ರಾಮೀಣ ಪ್ರದೇಶಗಳು ಮಾತ್ರವಲ್ಲದೇ ನಗರ ಸ್ಥಳೀಯ ಸಂಸ್ಥೆಗಳಲ್ಲೂ ಕೂಡ ಇದೇ ರೀತಿ ಯೋಜನೆ ರೂಪಿಸಬೇಕು ಎಂದು ಹೇಳಿದರು.

ಸದ್ಯಕ್ಕೆ ಕುಡಿಯುವ ನೀರಿನ ಕೊರತೆ ಕಂಡುಬಂದಿಲ್ಲ; ಆದಾಗ್ಯೂ ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ಸಮಸ್ಯೆ ಉದ್ಭವಿಸಿದರೆ ಅದನ್ನು ಸಮರ್ಪಕವಾಗಿ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಯೋಜನಾ ಕೋಶದ ಯೋಜನಾ ನಿರ್ದೇಶಕ ಮಹಾಂತೇಶ ಕಲಾದಗಿ ವಿವರಿಸಿದರು.

ಬರಪೀಡಿತ ತಾಲ್ಲೂಕುಗಳಿಗೆ ಈಗಾಗಲೇ ತಲಾ 25 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ. ಇದಲ್ಲದೇ ಇದಕ್ಕೂ ಮುಂಚೆ ಬೆಳಗಾವಿ ಜಿಲ್ಲೆಗೆ 2 ಕೋಟಿ ರೂಪಾಯಿ ಕೂಡ‌ ಸರಕಾರ ಬಿಡುಗಡೆ‌ ಮಾಡಿದೆ ಎಂದು ಅಂಜುಂ ಪರ್ವೇಜ್ ತಿಳಿಸಿದರು.

ಬೆಳೆಹಾನಿ-ರೈತರ ಖಾತೆಗೆ 60.40 ಕೋಟಿ ಪರಿಹಾರ ಜಮೆ:

ಬರಗಾಲದಿಂದಾಗಿ ಬೆಳೆಹಾನಿಯಾಗಿರುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲೆಯಲ್ಲಿ 3,26,366 ರೈತರಿಗೆ 60,40,59,258 ಪರಿಹಾರ ಡಿಬಿಟಿ ಮೂಲಕ ಜಮೆ‌ ಮಾಡಲಾಗಿದೆ.

ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ‌ ನೋಂದಣಿ ಕಾರ್ಯವನ್ನು ಆದಷ್ಟು ಬೇಗನೇ ಪೂರ್ಣಗೊಳಿಸಿ ಬೆಳೆಹಾನಿ ಪರಿಹಾರವನ್ನು ಸಮರ್ಪಕವಾಗಿ ವಿತರಿಸಬೇಕು ಎಂದು‌ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಂಜುಂ ಪರ್ವೇಜ್ ಹೇಳಿದರು.

ಜಿಲ್ಲೆಯಲ್ಲಿ ಬರಗಾಲದಿಂದ ಬೆಳೆಹಾನಿಯಾಗಿರುವುದಕ್ಕೆ ಸಂಬಂಧಿಸಿದಂತೆ 4.65 ಲಕ್ಷ ರೈತರ ಪೈಕಿ ಇದುವರೆಗೆ 3.24 ಲಕ್ಷ ಜನರಿಗೆ ಪರಿಹಾರ ವಿತರಿಸಲಾಗಿದೆ. ಮುಂದಿನ ಹಂತದಲ್ಲಿ ಇನ್ನುಳಿದ ರೈತರಿಗೆ ಪರಿಹಾರ ವಿತರಣೆಗೆ ಕೂಡ ತ್ವರಿತವಾಗಿ ಅನುಮೋದನೆ‌ ನೀಡಬೇಕು ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ ಪ್ರಸ್ತುತ ಶೇ.15 ರಷ್ಟು ಮಾತ್ರ ನರೇಗಾ ಕಾರ್ಮಿಕರು ನೂರು ದಿನಗಳ ಉದ್ಯೋಗವನ್ನು ಪಡೆದುಕೊಂಡಿದ್ದಾರೆ. ಅದೇ ರೀತಿ‌ ಉಳಿದವರಿಗೂ ಕೆಲಸ ಒದಗಿಸಬೇಕು ಎಂದರು.

ಗೃಹಲಕ್ಷ್ಮೀ ಯೋಜನೆಯಲ್ಲಿ ನೋಂದಾಯಿತ‌ ಶೇ.5 ರಷ್ಟು ಫಲಾನುಭವಿಗಳಿಗೆ ಇದುವರೆಗೆ ಹಣ ಜಮೆಯಾಗದಿರುವ ಬಗ್ಗೆ ವಿವರಣೆ ಕೇಳಿದ ಅವರು, ಕೆ.ವೈ.ಸಿ. ಪೂರ್ಣಗೊಳಿಸಿ ಹಣ ಜಮೆ‌ ಮಾಡಬೇಕು ಎಂದು ಸೂಚನೆ ನೀಡಿದರು.

ಯುವನಿಧಿ ಯೋಜನೆಯಡಿ ಇದುವರೆಗೆ 10,318 ಜನರು ನೋಂದಣಿ ಮಾಡಿಕೊಂಡಿದ್ದು, ಪರಿಶೀಲನೆ‌ ಬಳಿಕ ಭತ್ಯೆ ಜಮೆ‌ ಮಾಡಲು ಕ್ರಮ ಕೈಗೊಳ್ಳಬೇಕು.

ಬೈಲಹೊಂಗಲ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಎರಡು ವರ್ಷಕ್ಕಿಂತ ಹಳೆಯದಾಗಿರುವ 128 ಪ್ರಕರಣಗಳನ್ನು ಕೂಡಲೇ ವಿಲೇವಾರಿ ಮಾಡಬೇಕು ಎಂದು ನಿರ್ದೇಶನ ನೀಡಿದರು.
ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದ ಪ್ರಕರಣಗಳ ಇತ್ಯರ್ಥಕ್ಕೆ ಆದ್ಯತೆ ನೀಡಬೇಕು ಎಂದರು.

ಜಿಲ್ಲೆಯಲ್ಲಿ ಯಾವುದೇ ಇಲಾಖೆಯ ಪ್ರಮುಖ ಯೋಜನೆ ಬಾಕಿ, ಜಮೀನು ಮಂಜೂರಾತಿ, ಅನುದಾನ‌ ಬಿಡುಗಡೆ ಅಥವಾ ವಿಳಂಬ ಸೇರಿದಂತೆ‌ ಏನೇ ಸಮಸ್ಯೆಗಳಿದ್ದರೂ ತಮ್ಮ ಗಮನಕ್ಕೆ ತಂದರೆ ರಾಜ್ಯಮಟ್ಟದಲ್ಲಿ‌ ಚರ್ಚಿಸಿ ಬಗೆಹರಿಸಿಕೊಡುವುದಾಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಂಜುಂ ಪರ್ವೇಜ್ ತಿಳಿಸಿದರು.

ಅನ್ನಭಾಗ್ಯ ಯೋಜನೆಯಡಿ ಜುಲೈ ಮಾಹೆಯಿಂದ ಇಲ್ಲಿಯವರೆಗೆ ಒಟ್ಟಾರೆ 320 ಕೋಟಿ ರೂಪಾಯಿ ಡಿಬಿಟಿ ಮೂಲಕ ಜಮೆ‌ ಮಾಡಲಾಗಿದೆ. ಐದು ಕೆ.ಜಿ.‌ಅಕ್ಕಿಯನ್ನು ವಿತರಿಸಲಾಗುತ್ತಿದ್ದು, ಉಳಿದ ಐದು ಕೆ.ಜಿ. ಅಕ್ಕಿ ಬದಲಾಗಿ ಪ್ರತಿ‌ ಸದಸ್ಯರಿಗೆ ಪ್ರತಿ ಮಾಹೆ ತಲಾ 170 ರೂಪಾಯಿಯಂತೆ ಹಣವನ್ನು ಡಿಬಿಟಿ ಮೂಲಕ ನೀಡಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ್ ಕಂಕಣವಾಡಿ ಸಭೆಯಲ್ಲಿ ತಿಳಿಸಿದರು.

ಜಿಲ್ಲೆಯ ಒಟ್ಟಾರೆ ಪ್ರಗತಿ ಹಾಗೂ ಬರ ನಿರ್ವಹಣೆಗೆ ತೆಗೆದುಕೊಳ್ಳಲಾಗಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ‌ನೀಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ಬರಗಾಲದಿಂದ ಜಿಲ್ಲೆಯಲ್ಲಿ ಬೆಳೆಹಾನಿ ಅನುಭವಿಸಿರುವ 3,26,366 ರೈತರಿಗೆ 60,40,59,258 ಪರಿಹಾರ ಡಿಬಿಟಿ ಮೂಲಕ ಜಮೆ‌ ಮಾಡಲಾಗಿದೆ ಎಂದು ಹೇಳಿದರು.

ಫಲಾನುಭವಿಗಳ ಹೆಸರು‌ ಹಾಗೂ ಕ್ಷೇತ್ರಗಳ ಮಾಹಿತಿಯ ಹೊಂದಾಣಿಕೆ‌ ಆಗದಿರುವುದರಿಂದ‌ ತಾಂತ್ರಿಕ‌ ಕಾರಣಗಳಿಂದ‌ ಕೆಲವು ರೈತರಿಗೆ ಮಾತ್ರ ಇದುವರೆಗೆ ಪರಿಹಾರ ಮೊತ್ತ ಜಮೆಯಾಗಿರುವುದಿಲ್ಲ. 
ತಾಂತ್ರಿಕ ಸಮಸ್ಯೆ ಸರಿಪಡಿಸಿ ಆದಷ್ಟು ಬೇಗನೇ ಉಳಿದವರಿಗೂ ಪರಿಹಾರ ಜಮೆ‌ ಮಾಡಲಾಗುವುದು ಎಂದರು.
72 ಸಾವಿರ ಮರಣ ಪ್ರಕರಣಗಳಿರುವುದರಿಂದ ಸ್ವಲ್ಪಮಟ್ಟಿಗೆ ತಡವಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಸರಕಾರ ಈಗಾಗಲೇ ಮೇವಿನ ಮಿನಿ ಕಿಟ್ ಗಳನ್ನು ವಿತರಿಸಿದೆ. ಅದೇ ರೀತಿ ಮೇವಿನ ಕೊರತೆ ನೀಗಿಸಲು ಹಾಲು ಒಕ್ಕೂಟಗಳು ಕೂಡ ಸ್ವಯಂಪ್ರೇರಿತರಾಗಿ ಮಿನಿ ಕಿಟ್ ಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸಲು ಹೊರ ಗುತ್ತಿಗೆ ಆಧಾರಲ್ಲಿ ತಜ್ಞವೈದ್ಯರು ಆಸಕ್ತಿ ತೋರಿಸುತ್ತಿಲ್ಲ; ಆದ್ದರಿಂದ ಖಾಯಂ ತಜ್ಞ ವೈದ್ಯರನ್ನು ನೇಮಿಸಿದರೆ ಅನುಕೂಲವಾಗುತ್ತದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಹೇಳಿದರು.

ಪ್ರೊಬೇಷನರಿ ಐ.ಎ..ಎಸ್. ಅಧಿಕಾರಿ ಶುಭಂ‌ ಶುಕ್ಲಾ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ, ಸ್ಮಾರ್ಟ್ ಸಿಟಿ‌ ವ್ಯವಸ್ಥಾಪಕ ನಿರ್ದೇಶಕರಾದ ಸಯೀದಾ ಆಫ್ರಿನ್ ಬಾನು ಬಳ್ಳಾರಿ, ಉಪ ವಿಭಾಗಾಧಿಕಾರಿಗಳಾದ ಪ್ರಭಾವತಿ, ಶ್ರವಣ ನಾಯಕ, ಸಂಪಗಾವಿ ಸೇರಿದಂತೆ ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಅಧಿಕಾರಿಗಳು ಕ್ಯಾಲೆಂಡರ ಬಿಡುಗಡೆ ಮಾಡಿದರು

ಕ್ಯಾಲೆಂಡರ್ ಬಿಡುಗಡೆ:

ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತ ಜಲಜೀವನ್ ಮಿಷನ್ ವತಿಯಿಂದ ಹೊರತರಲಾದ ಕ್ಯಾಲೆಂಡರ್ ಅನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಂಜುಂ ಪರ್ವೇಜ್ ಬಿಡುಗಡೆಗೊಳಿಸಿದರು.
ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪ ಸೇರಿದಂತೆ ಇತರರು ಇದ್ದರು.

Post a Comment

0 Comments