ಡಾ ಬಿ. ಆರ್. ಅಂಬೇಡ್ಕರ ಹಾಗೂ ಡಾ ಬಾಬು ಜಗಜೀವನ ರಾಮ ಅವರ ಜಯಂತಿ ಆಚರಣೆ ನಿಮಿತ್ತ ಪೂರ್ವಭಾವಿ ಸಭೆ ಜರುಗಿತು


ಕಿತ್ತೂರ ವಿಜಯ

ಚನ್ನಮ್ಮನ ಕಿತ್ತೂರು: ಹಸಿರು ಕ್ರಾಂತಿಯ ಹರಿಕಾರ ಡಾ ಬಾಬು ಜಗಜೀವನ ರಾಮ ಹಾಗೂ ಸಂವಿಧಾನ ಶಿಲ್ಪಿ ಡಾ ಬಿ. ಆರ್. ಅಂಬೇಡ್ಕರ ಅವರ ಜಯಂತ್ಯೋತ್ಸವ ಹಿನ್ನಲೆಯಲ್ಲಿ ಪಟ್ಟಣದ ಪಟ್ಟಣ ಪಂಚಾಯತ ಆವರಣದಲ್ಲಿ ಇರುವ ಡಾ ಬಿ. ಆರ್. ಅಂಬೇಡ್ಕರ ಸಭಾ ಭವನದಲ್ಲಿ ಶನಿವಾರ ಪೂರ್ವಭಾವಿ ಸಭೆ ಜರುಗಿತು. 

ಪೂರ್ವಭಾವಿ ಸಭೆಯ ಅಧ್ಯಕ್ಷ ಸ್ಥಾನ ವಹಿಸಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿ. ಬಿ. ಯಮನೂರ ಮಾತನಾಡಿ ಈ ವರ್ಷ ಲೋಕಸಭಾ ಚುನಾವಣೆ ನಿಮಿತ್ತ ನೀತಿ ಸಂಹಿತೆ ಜಾರಿ ಇರುವುದರಿಂದ ಸರ್ಕಾರದ ನಿರ್ದೇಶನದಂತೆ ಇರ್ವರ ಜಯಂತಿ ಆಚರಿಸಲಾಗುವುದು. ಆಯಾ ಇಲಾಖೆ ಅಧಿಕಾರಿಗಳಿಗೆ ಒಂದೊಂದು ಜವಾಬ್ದಾರಿ ವಹಿಸಿಲಾಗುವುದು. ಕುಂಭ ಮೇಳ, ಜಗ್ಗಲಗಿ, ಕರಡಿ ಮಜಲು ಸೇರಿದಂತೆ ಇನ್ನೂ ಅನೇಕ ಕಲಾ ತಂಡಗಳನ್ನೊಳಗೊಂಡ ಮೆರವಣಿಗೆ  ಹಮ್ಮಿಕೊಂಡು ಉಭಯ ಮಹಾನಾಯಕರ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುವುದು ಎಂದು ಹೇಳಿದರು.

ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ವಿವಿಧ ಇಲಾಖೆಗಳಿಂದ ಬೆರಳೆಣಿಕೆಯಷ್ಟು ಅಧಿಕಾರಿಗಳು ಹಾಜರಾದ ಹಿನ್ನಲೆಯಲ್ಲಿ ಕೆಲವು ದಲಿತ ಮುಖಂಡರು ಬೇಸರ ವ್ಯಕ್ತ ಪಡಿಸಿ ಸಭೆಗೆ ಹಾಜರಾಗದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು. 

ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ ಮುಖಂಡರು

“ಫೆ 10 ರಂದು ನಡೆದ ಸಂವಿಧಾನ ಜಾಗೃತಿ ಜಾಥಾ ಪೂರ್ವಭಾವಿ ಸಭೆಗೆ ಹಾಜರಾಗದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಿರಿ. ಯಾವ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡಿದ್ದಿರಿ, ಯಾವ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದಿರಿ ಎಂದು ಈ ಸಭೆಯಲ್ಲಿ ಎಲ್ಲರಿಗೂ ತೋರಿಸಿ. ಸುಮ್ಮನೆ ಸಭೆಯಲ್ಲಿ ಕಾಟಾಚಾರಕ್ಕೆ ಏನಾದರೂ ಹೇಳಿ ಹೋಗಬಾರದು”. ಮಡಿವಾಳೆಪ್ಪ ವಕ್ಕುಂದ ಕರ್ನಾಟಕ ಮಾದಿಗರ ಸಂಘದ ಬೆಳಗಾವಿ ಜಿಲ್ಲಾ ಅಧ್ಯಕ್ಷರು

“ದಲಿತ ಸಮಾಜದ ಅನೇಕರು ಸಾಧನೆ ಮಾಡಿದ್ದಾರೆ ಅಂತವರಿಗೆ ಸನ್ಮಾನ ಮಾಡುವ ಮೂಲಕ ಗೌರವಿಸಬೇಕು ಮತ್ತು ಜನೆವರಿ 10 ರಂದು ಪಂಜಾಬ ಗಡಿ ಭದ್ರತಾ ಪಡೆ (ಬಿಎಸ್ಎಫ್) ನಲ್ಲಿ ಸೇವೆ ಸಲ್ಲಿಸುವ ಸಮಯದಲ್ಲಿ ಉದಯ ಪುಂಡಲೀಕ ಗಾಳಿ ಸಾವನ್ನಪ್ಪಿದ್ದಾರೆ ಅವರ ಕುಟುಂಬದ ಸದಸ್ಯರನ್ನು ಕರೆದು ಅವರಿಗೆ ಗೌರವ ಸೂಚಿಸಬೇಕು”. ಫಕ್ಕಿರಪ್ಪ ಜಾಂಗಟಿ ದಲಿತ ಮುಖಂಡರು ನಿಚ್ಚಣಕಿ

ಈ ವೇಳೆ ಸಂಜು ಲೋಕಾಪೂರ, ರಾಜು ಜಾಂಗಟಿ, ಸುಭಾಷ ಹಂಚಿನಮನಿ, ಬಸವರಾಜ ಕೆಳಗಡೆ, ಕಿತ್ತೂರು ಪ.ಪಂ ಮುಖ್ಯಾಧಿಕಾರಿ ಮಲ್ಲಯ್ಯಾ ಹಿರೇಮಠ, ಎಂ.ಕೆ. ಹುಬ್ಬಳ್ಳಿ ಪ.ಪಂ ಮುಖ್ಯಾಧಿಕಾರಿ ರವಿ ಭಾಗಲಕೋಟೆ ಮತ್ತು ಸಿಬ್ಬಂದಿ, ಕಂದಾಯ, ಪೊಲೀಸ್, ಲೋಕೋಪಯೋಗಿ, ತಾಲೂಕಾ ಪಂಚಾಯತ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ, ನಾನಾ ದಲಿತ ಸಂಘಗಳ ಪದಾಧಿಕಾರಿಗಳು ಸರ್ವ ಸದಸ್ಯರು ಸೇರಿದಂತೆ ಪಟ್ಟಣದ ನಾಗರಿಕರು ಇದ್ದರು.


Post a Comment

0 Comments