ಶಿವಮೊಗ್ಗ: ಅತಿರುದ್ರ ಮಹಾಯಾಗ ಸಂಚಾಲನಾ ಸಮಿತಿ ಹಾಗೂ ಭಕ್ತ ವೃಂದದ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ ಹಾಗೂ ದೇಶದ ನೆಚ್ಚಿನ ಮಹಾನಾಯಕ ಸನ್ಮಾನ್ಯ ನರೇಂದ್ರ ಮೋದಿ ಜೀಯವರು ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಲೆಂದು ಪ್ರಾರ್ಥಿಸಿ ಇದೇ ಮಾರ್ಚ್ 5 ಮತ್ತು 6 ರಂದು ಅತಿರುದ್ರ ಮಹಾಯಾಗವನ್ನು ಹಮ್ಮಿಕೊಂಡ ಹಿನ್ನೆಲೆಯಲ್ಲಿ ಶುಕ್ರವಾರ ವಿನೋಬನಗರ ಶಿವಾಲಯದ ಸಭಾ ಭವನದಲ್ಲಿ ಸಿದ್ಧತೆ ಕುರಿತ ಪೂರ್ವಭಾವಿ ಸಭೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹಾಗೂ ಸಂಸದರಾದ ಬಿ.ವೈ.ರಾಘವೇಂದ್ರ ಅವರ ನೇತೃತ್ವದಲ್ಲಿ ನೆರವೇರಿತು.
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಮಾತನಾಡಿ, ನಮ್ಮ ನಿಮ್ಮೆಲ್ಲರ ನೆಚ್ಚಿನ ರಾಘಣ್ಣ ಅವರ ಹೆಸರನ್ನು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದೆಹಲಿಗೆ ಕಳಿಸಲಾಗಿದೆ, ಶಿವಮೊಗ್ಗದಲ್ಲಿ ಅತಿ ರುದ್ರ ಮಹಾಯಾಗ ನಡೆಯುತ್ತಿದ್ದು, ಇದೊಂದು ಶುಭ ಸೂಚನೆ ಎಂದೇ ಹೇಳಬಹುದು. ಈ ಯಾಗವು ಯಶಸ್ವಿಯಾಗಲು ಎಲ್ಲರೂ ಶ್ರಮಿಸೋಣ, ಪ್ರಧಾನಿ ನರೇಂದ್ರ ಮೋದಿ ಜೀ ಅವರಿಗೆ ಯಾಗವು ಹೆಚ್ಚು ಬಲ ತರಲಿದೆ ಎಂದರು.,
ಈ ಸಂದರ್ಭ ಸಂಸದ ಬಿ.ವೈ.ರಾಘವೇಂದ್ರ ಅವರು ಮಾತನಾಡಿ,ಮುಂಬರುವ ಲೋಕ ಸಭಾ ಚುನಾವಣಾ ಅಭ್ಯರ್ಥಿಯಾಗಿ ಮೊದಲ ಪಟ್ಟಿಯಲ್ಲಿ ನನ್ನ ಹೆಸರು ಬರುವ ನಿರೀಕ್ಷೆ ಇದೆ, ಅತಿರುದ್ರಯಾಗದ ಒಳಗೆ ಪ್ರಕಟವಾದರೆ ನನ್ನ ಅದೃಷ್ಟ,ಅದು ಇನ್ನೂ ಹೆಚ್ಚಿನ ಸಂತಸ ಕೊಡಲಿದೆ, ಅತಿರುದ್ರ ಮಹಾಯಾಗವು ಯಾವುದೇ ಜಾತಿ, ಮತ, ಪಂಥವಿಲ್ಲದೇ ನಡೆಯಲಿದೆ. ಮಾ. 5 ರಂದು ಮಂಗಳವಾರ ಇಡೀ ದಿನ ಧಾರ್ಮಿಕ ಕಾರ್ಯಗಳು ನಡೆಯಲಿದ್ದು, ಉಪಾಹಾರ, ಬೋಜನ ವ್ಯವಸ್ಥೆ ಇದ್ದು, ಸರ್ವ ಜನಾಂಗದವರೂ ಕುಟುಂಬ ಸಮೇತರಾಗಿ ಭಾಗವಹಿಸುವ ಮೂಲಕ ಮಹಾಯಾಗ ಮತ್ತು 6 ರಂದು ನಡೆಯಲಿರುವ ಧರ್ಮ ಸಭೆಯ ಯಶಸ್ವಿಗೆ ಕಾರಣರಾಗಬೇಕು ಎಂದು ಮನವಿ ಮಾಡಿದರು.
ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ.ಧನಂಜಯ ಸರ್ಜಿ ಮಾತನಾಡಿ, ವೇದೋಕ್ತವಾದ ನಮಕ(ರುದ್ರ)ದಿಂದ ಅಭಿಷೇಕ ಮಾಡುವುದು ಅತ್ಯಂತ ಶ್ರೇಷ್ಠವಾದದ್ದು. ಭಕ್ತಿ, ಶ್ರದ್ಧೆಯಿಂದ ಒಂದು ಬಾರಿ ರುದ್ರಾಭಿಷೇಕ ಮಾಡಿದರೆ ಸಕೃತಾವರ್ತನ ರುದ್ರಾಭಿಷೇಕ, 11 ಬಾರಿ ಮಾಡಿದರೆ ಏಕಾದಶಾವರ್ತನ ರುದ್ರಾಭಿಷೇಕ, 121 ಬಾರಿ ಮಾಡಿದರೆ ಲಘು(ಶತ) ರುದ್ರಾಭಿಷೇಕ, 1331 ಬಾರಿ ಮಾಡಿದರೆ ಮಹಾರುದ್ರಾಭಿಷೇಕ ಮತ್ತು 14641 ಬಾರಿ ಮಾಡಿದರೆ “ಅತಿರುದ್ರಾಭಿಷೇಕವಾಗುವುದು. ರುದ್ರವನ್ನು ಶ್ರವಣ ಮಾಡುವುದರಿಂದ ನಮ್ಮ ಪಾಪಗಳು ದೂರವಾಗುತ್ತವೆ. ಆ ಉದ್ದೇಶದಿಂದ ಲೋಕಕಲ್ಯಾಣಾರ್ಥವಾಗಿ ಮಹಾಯಾಗವನ್ನು ಹಮ್ಮಿಕೊಳ್ಳಲಾಗಿದೆ. ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಂಡಿರುವ ಅತಿರುದ್ರ ಮಹಾಯಾಗವನ್ನು ಎಲ್ಲರೂ ಒಂದಾಗಿ ಯಶಸ್ವಿಯಾಗಿ ನಡೆಸೋಣ, ಮೋದಿ ಜೀ ಯವರು ಮತ್ತೊಮ್ಮೆ ಪ್ರಾದನ ಮಂತ್ರಿ ಆಗಬೇಕು, ಹಾಗೆಯೇ ಸಂಸದ ರಾಘಣ್ಣ ಅವರು ಮುಂಬರುವ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವನ್ನು ಸಾಧಿಸಿ, ಕೇಂದ್ರದ ಮಂತ್ರಿಯಾಗಲಿ ಎಂದು ಪ್ರಾರ್ಥಿಸೋಣ ಎಂದು ಹೇಳಿದರು.
ವೇದಿಕೆಯಲ್ಲಿ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಎನ್.ಜೆ.ರಾಜಶೇಖರ್ (ಸುಭಾಷ್), ಉಪಾಧ್ಯಕ್ಷರಾದ ಎಚ್.ವಿ.ಮಹೇಶ್ವರಪ್ಪ, ಎಸ್.ದತ್ತಾತ್ರಿ, ಉದ್ಯಮಿ ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ, ವಾಸುದೇವ್, ಜ್ಞಾನೇಶ್ವರ್, ನಾಗಯ್ಯ ಶಾಸ್ತ್ರಿ ಮತ್ತಿತರರು ಹಾಜರಿದ್ದರು.
0 Comments