ಶ್ರೀ ಕಲ್ಮಠದಲ್ಲಿ ವಿವಿಧ ಸಂಘಟನೆಗಳಿಂದ ಸಂಭ್ರಮದ ಕಾರ್ತಿಕ ಮಾಸ ಆಚರಣೆ.
ಚನ್ನಮ್ಮನ ಕಿತ್ತೂರು:- ಹಿಂದೂ ಪಂಚಾಂಗದ ಪ್ರಕಾರ 12 ಮಾಸಗಳಿದ್ದು ಚಳಿಗಾಲ
ಆರಂಭವಾಗುವ ಮಾಸವೇ ಕಾರ್ತಿಕ ಮಾಸವಾಗಿದ್ದು ಅತೀ ಪವಿತ್ರ ಹಾಗೂ ಶ್ರೇಷ್ಠ
ಮಾಸವೆಂದು ಗುರುತಿಸಲ್ಪಟ್ಟಿದೆ ಎಂದು ಕಿತ್ತೂರ ತಾಲೂಕಾ ಕನ್ನಡ ಸಾಹಿತ್ಯ
ಪರಿಷತ್ತಿನ ಅಧ್ಯಕ್ಷರಾದ ಡಾ..ಎಸ್.ಬಿ.ದಳವಾಯಿ ತಿಳಿಸಿದರು..ಅವರು ಶ್ರೀ ಕಲ್ಮಠದಲ್ಲಿ
ರಾಜಗುರು ಸಂಸ್ಥಾನ ಕಲ್ಮಠ, ಬೆಳ್ಳಿ ಚುಕ್ಕಿ ರಾಣಿ ಚನ್ನಮ್ಮ ಮಹಿಳಾ ವೇದಿಕೆ, ಕಿತ್ತೂರ
ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ
ಸಾಯಂಕಾಲ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಕಾರ್ತಿಕ
ಮಾಸದಲ್ಲಿ ದೀಪಗಳನ್ನು ಬೆಳಗಿಸುವದರ ಮೂಲಕ ಮನಸ್ಸಿನಲ್ಲಿರುವ ಅಂಧಕಾರವನ್ನು
ದೂರಮಾಡಿಕೊಳ್ಳಲು ಮತ್ತು ಐಶ್ವರ್ಯ,ಸಂಪತ್ತು,ಸುಖ,ಆರೋಗ್ಯಗಳನ್ನು ಪಡೆಯಲು
ಪರಮೇಶ್ವರನ ಆರಾಧನೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಮಹಿಳಾ ವೇದಿಕೆಯ
ಸಹೋದರಿಯರು ರಂಗೋಲಿ ಹಾಕಿ,ರಾಣಿ ಚನ್ನಮ್ಮಳ ಭಾವ ಚಿತ್ರಕ್ಕೆ ಮಾಲಾರ್ಪಣೆ
ಮಾಡಿ,ದೀಪ ಬೆಳಗಿಸಿ, ಶಿವನ ಆರಾಧನೆಯ ಗೀತೆಗಳನ್ನು ಹಾಡುವದರ ಮೂಲಕ
ಕಾರ್ತಿಕೋತ್ಸವವನ್ನು ಸಂಭ್ರಮದಿಂದ ಆಚರಿಸಿದರು. ಮಕ್ಕಳು ಆಕಾಶ ಬುಟ್ಟಿಗಳನ್ನು
ಆಕಾಶಕ್ಕೆ ಹಾರಿಬಿಟ್ಟು ಸಂಭ್ರಮಿಸಿದ್ದು ವಿಶೇಷವಾಗಿತ್ತು.
ಸಾನಿಧ್ಯ ವಹಿಸಿದ್ದ ಶ್ರೀ ಕಲ್ಮಠದ ಪೂಜ್ಯ ಮಡಿವಾಳ ರಾಜಯೋಗೀಂದ್ರ
ಮಹಾಸ್ವಾಮಿಗಳು ಕಾರ್ತಿಕ ಮಾಸದಲ್ಲಿ ದೀಪಾರಾಧನೆಯು ವಿಶೇಷತೆಯನ್ನು
ಹೊಂದಿದ್ದು ಸೂರ್ಯೋದಯ ಮತ್ತು ಸೂರ್ಯಾಸ್ಥದ ಸಮಯದಲ್ಲಿ ದೀಪ ಬೆಳಗಿಸಿ
ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಕಾರ್ತಿಕ ಮಾಸದ ಅಧಿಪತಿಯಾದ ಶಿವನ
ಧ್ಯಾನ ಮಾಡುವಂತಾಗಬೇಕೆಂದು ಆಶೀರ್ವದಿಸಿದರು.
ಸೌಮ್ಯಾ ರಾಘವೇಂದ್ರ ಸ್ವಾಗತಿಸಿದರು.ಉಮಾದೇವಿ ಬಿಕ್ಕಣ್ಣವರ ಪ್ರಾಸ್ತಾವಿಕ
ಮಾತುಗಳನ್ನಾಡಿದರು.ಪ್ರಭಾಲ ಮಠ ವಂದಿಸಿದರು.ನಿಖಿತಾ ದಡ್ಡಿ
ನಿರೂಪಿಸಿದರು.ಆನಂದ ಶಿವಳ್ಳಿಮಠ,ಶಿಕ್ಷಕಿಯರಾದ ಬೈಲಪ್ಪನವರ ಮತ್ತು ನಂದಾ
ಕಾಜಗಾರ ಮತ್ತು ವಿವಿಧ ಸಂಘಟನೆಗಳ ಸದಸ್ಯರುಗಳು ಉಪಸ್ಥಿತರಿದ್ದರು.
0 Comments