“ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ - ಹಿರಿಯ ಸಾಹಿತಿ ಶ್ರೀ ಬಿ.ವಿ.ನೇಸರಗಿ
ಚನ್ನಮ್ಮನ ಕಿತ್ತೂರು :-- ಮೈಸೂರು ರಾಜ್ಯ ಇದ್ದುದು ಕರ್ನಾಟಕ ರಾಜ್ಯ ಎಂದು ನಾಮಕರಣವಾಗಿ 50 ವರುಷಗಳಾದ ಈ ಸಮಯದಲ್ಲಿ
ಕರ್ನಾಟಕ ಸರಕಾರವು "ಕರ್ನಾಟಕ ಸುವರ್ಣ ಸಂಭ್ರಮ -50" ನ್ನು ವರುಷವಿಡೀ ಆಚರಿಸುತ್ತಿರುವದು ಹೆಮ್ಮೆಯ ವಿಷಯವಾಗಿದೆ ಎಂದು
ಹಿರಿಯ ಕವಿ, ಲೇಖಕ, ಸಾಹಿತಿ, ಶಿಕ್ಷಕ, ನಿವೃತ್ತ ಶಿಕ್ಷಣಾಧಿಕಾರಿಗಳಾದ ಶ್ರೀ ಬಿ. ವಿ ನೇಸರಗಿ ಸಂತಸ ವ್ಯಕ್ತಪಡಿಸಿದರು. ಈ ಸಮಯದಲ್ಲಿ ಮನೆಗೆ
ಬಂದು ಗೌರವಿಸಿರುವದಕ್ಕೆ ಕಿತ್ತೂರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲ ಪದಾಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸುತ್ತಾ “ಹೆಸರಾಯಿತು
ಕರ್ನಾಟಕ ಉಸಿರಾಗಲಿ ಕನ್ನಡ “ ಎಂಬ ಘೋಷ ವಾಕ್ಯ ನೆನಪಿಸಿದರು.
ಪ್ರಾಸ್ತಾವಿಕ ಮಾತುಗಳನ್ನು ಆಡುತ್ತಾ ಕಿತ್ತೂರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಸ್. ಬಿ. ದಳವಾಯಿ ವರುಷವಿಡೀ
“ಕರ್ನಾಟಕ ಸಂಭ್ರಮ -50” ನ್ನು ಆಚರಿಸುತ್ತಿರುವ ಈ ಸಮಯದಲ್ಲಿ ನಾವುಗಳು “ಪ್ರತಿ ತಿಂಗಳು ಸಾಹಿತಿಗಳ ಮನೆ ಮನೆಗೆ” ವಿಶೇಷ
ಅಭಿಯಾನವನ್ನು ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದು, ಕಿತ್ತೂರು ತಾಲೂಕಿನ ಸಾಹಿತಿಗಳನ್ನು ಗುರುತಿಸಿ ಅವರ ಊರಿನ ಮನೆಗೆ
ಹೋಗಿ ಸನ್ಮಾನಿಸುವ ಯೋಜನೆ ಹಾಕಿಕೊಂಡಿದ್ದು ಪ್ರಥಮವಾಗಿ 95ರ ಉತ್ಸಾಹಿ ಹಿರಿಯ ಸಾಹಿತಿಗಳನ್ನು ಆಯ್ಕೆ ಮಾಡಿರುವದು ಸಂತಸವಾಗಿದೆ
ಎಂದು ತಿಳಿಸಿದರು.
"ಕರ್ನಾಟಕ ಸುವರ್ಣ
ಸಂಭ್ರಮ -50" ರ ಕುರಿತು ಉಪನ್ಯಾಸ ನೀಡಿದ ಕಿತ್ತೂರಿನ ವಸ್ತು ಸಂಗ್ರಹಾಲಯದ ಕ್ಯೂರೇಟರ ಶ್ರೀ ರಾಘವೇಂದ್ರ ಮೈಸೂರು ರಾಜ್ಯ
ಕರ್ನಾಟಕ ರಾಜ್ಯ ಎಂದು ನಾಮಕರಣವಾಗಿ ಬೆಳೆದು ಬಂದ ಬಗೆಯನ್ನು ವಿವರಿಸಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ
ಜವಾಬ್ದಾರಿ ಎಂದು ತಿಳಿಸಿದರು.
ಅಧ್ಯಕ್ಷೀಯ ಸಮಾರೋಪ ನುಡಿಗಳಲ್ಲಿ ಹಿರೇನಂದಿಹಳ್ಳಿ ಸರಕಾರಿ ಪ್ರೌಢಶಾಲೆಯ ಮುಖ್ಯ ಅಧ್ಯಾಪಕರಾದ ಶ್ರೀ ಬಸವರಾಜ ಬಿದರಿ
ಕನ್ನಡ ಭಾಷೆಗೆ ಸಾವಿರಾರು ವರುಷಗಳ ಇತಿಹಾಸವಿದ್ದು ಅದರ ಬಗೆಗೆ ನಾವುಗಳು ತಿಳಿದುಕೊಳ್ಳಬೇಕು ಮತ್ತು ಹೆಮ್ಮೆ ಪಡಬೇಕು. ಕನ್ನಡ
ಪುಸ್ತಕಗಳನ್ನು ಓದುವ ರೂಢಿ ಬೆಳೆಸಿಕೊಂಡು ಕವಿಗಳನ್ನು, ಲೇಖಕರನ್ನು ಮತ್ತು ಸಾಹಿತಿಗಳನ್ನು ಗೌರವಿಸಿ ಪ್ರೋತ್ಸಾಹಿಸಲು ಮನವಿ ಮಾಡಿದರು.
ಆಶಯ ನುಡಿಗಳನ್ನು ಕಿತ್ತೂರು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಸುನಂದಾ ಪಾಟೀಲ
ನೀಡುತ್ತಾ ಪ್ರತಿ ತಿಂಗಳು ಸಾಹಿತಿಗಳ ಮನೆಗೆ ಹೋಗಿ ಅವರನ್ನು ಗೌರವಿಸುವ ಯೋಜನೆಯ ಉದ್ದೇಶಗಳನ್ನು ತಿಳಿಸುತ್ತ ಶುಭ ಕೋರಿದರು.
ತಾಯಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸುವದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕಿತ್ತೂರ ತಾಲೂಕ ಕನ್ನಡ
ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ತುರಮರಿ ಗ್ರಾಮದ ಕನ್ನಡಾಭಿಮಾನಿಗಳು, ಪತ್ರಿಕಾ ಮಿತ್ರರು, ಸಾಹಿತಿಗಳಾದ ಭುವನಾ ಹಿರೇಮಠ,
ರಾಜಶೇಖರ ಕೋಟಿ, ಮೆಹಬೂಬ ಮುಲ್ತಾನಿ ಮತ್ತು ನೇಸರಗಿ ಗುರುಗಳ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. ಶ್ರೀಮತಿ ಪ್ರಭಾ ಲದ್ದಿಮಠ
ಸ್ವಾಗತಿಸಿದರು. ಗಂಗಾಧರ ಹನಮಸಾಗರ ವಂದಿಸಿದರು. ಕಸಾಪ ಗೌರವ ಕಾರ್ಯದರ್ಶಿ ವಿ.ಎಸ್.ನಂದಿಹಳ್ಳಿ ನಿರೂಪಿಸಿದರು.
ಪೋಟೊ: ಕಿತ್ತೂರು ತಾಲೂಕು ಕಸಾಪ ಘಟಕದಿಂದ “ಕರ್ನಾಟಕ ಸಂಭ್ರಮ -50'ನ್ನು ಆಚರಿಸುತ್ತೀರುವ ಸಂದರ್ಭದಲ್ಲಿ ಸಾಹಿತಿಗಳ ಮನೆ
ಮನೆಗೆ ವಿಶೇಷ ಅಭಿಯಾನದ ಅಡಿಯಲ್ಲಿ 95ರ ವಯಸ್ಸಿನ ಹಿರಿಯ ಸಾಹಿತಿ ಶ್ರೀ ಬಿ. ವಿ. ನೇಸರಗಿ ದಂಪತಿಗಳನ್ನು ಸನ್ಮಾನಿಸಲಾಯಿತು.
ತಾಲೂಕಾ ಕಸಾಪ ಅಧ್ಯಕ್ಷರಾದ ಡಾ. ಎಸ್. ಬಿ. ದಳವಾಯಿ, ಮುಖ್ಯಾಧ್ಯಾಪಕ ಬಿ.ಸಿ.ಬಿದರಿ, ಎಮ್.ಎ.ಕಳಸಣ್ಣವರ, ರಾಜಶೇಖರ ರಗಟಿ,
ಬಸವರಾಜ ದಳವಾಯಿ ಇತರರು ಚಿತ್ರದಲ್ಲಿದ್ದಾರೆ.
0 Comments