Kittur : MK Vani E-paper-05-05-2023 ಕನ್ನಡ ಭಾಷೆಯ ಹಿರಿಮೆಯನ್ನು ಉಳಿಸಿ ಬೆಳೆಸುವದು ನಮ್ಮೆಲ್ಲರ ಜವಾಬ್ದಾರಿ : ಶ್ರೀ ಎನ್.ಐ.ಹುಲೆಪ್ಪನವರಮಠ

 

ಕನ್ನಡ ಭಾಷೆಯ ಹಿರಿಮೆಯನ್ನು ಉಳಿಸಿ ಬೆಳೆಸುವದು ನಮ್ಮೆಲ್ಲರ ಜವಾಬ್ದಾರಿ : ಶ್ರೀ ಎನ್.ಐ.ಹುಲೆಪ್ಪನವರಮಠ


ಚನ್ನಮ್ಮನ ಕಿತ್ತೂರು:- ಸುಮಾರು ೨೫೦೦ ವರ್ಷಗಳ ಹಿಂದೆಯೇ ಜನ್ಮತಾಳಿದ ಕನ್ನಡ ಭಾಷೆಯ
ಹಿರಿಮೆಯನ್ನು ಕಾಪಾಡಿಕೊಂಡು ಅದರ ಮಹತ್ವವನ್ನು ನಮ್ಮ ವಾರಸುದಾರರಾದ ಮಕ್ಕಳಿಗೆ ಯುವಕರಿಗೆ ತಿಳಿ ಹೇಳಿ ಬೆಳೆಸುವದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ, ಜಿಲ್ಲಾ ಮತ್ತು ತಾಲೂಕು ಘಟಕಗಳು ಹತ್ತು ಹಲವಾರು ಕಾರ್ಯಕ್ರಮಗಳ ಮೂಲಕ ಈ ದಿಶೆಯಲ್ಲಿ ಕ್ರಿಯಾಶೀಲರಾಗಬೇಕೆಂದು ಶ್ರೀ ಎನ್.ಐ. ಹುಲೆಪ್ಪನವರಮಠ ಮನವಿ ಮಾಡಿದರು. ಚನ್ನಮ್ಮನ ಕಿತ್ತೂರಿನ ಶ್ರೀ ರಾಘವೇಂದ್ರಮಠ ದ ಕಲ್ಯಾಣ ಮಂಟಪದಲ್ಲಿ ಕಿತ್ತೂರಿನ ಪ್ರಣವ ಯೋಗ ಕೇಂದ್ರದ ಸಹಕಾರದೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ೧೦೯ ನೇಯ ಸಂಸ್ಥಾಪನಾ ದಿನಚರಣೆಯ ಅಂಗವಾಗಿ ನಡೆದ “ಕನ್ನಡದ ಅಸ್ಮಿತೆ- ಕನ್ನಡ ಸಾಹಿತ್ಯ ಪರಿಷತ್ತು ಕುರಿತು ಉಪನ್ಯಾಸ ನೀಡಿದ ಶ್ರೀ ಎನ್.ಐ. ಹುಲೆಪ್ಪನವರಮಠ ಇಂದು ಕನ್ನಡ ಭಾಷೆಯಲ್ಲಿಯೂ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯುತ್ತಿರವದಕ್ಕೆ ಹರ್ಷ ವ್ಯಕ್ತಪಡಿಸುತ್ತಾ ಪ್ರತಿ ದಿವಸ ಮನೆಯವರೆಲ್ಲರೂ ಒಂದೆಡೆ ಕುಳಿತು ೧೦ ನಿಮಿಷವಾದರೂ ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಲು ತಿಳಿಸಿದರು. ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವದರ ಮೂಲಕ ಉದ್ಘಾಟಿಸಿದ ಶಿಕ್ಷಕರಾದ ಪ್ರಭು ಪಾಟೀಲ ಇಂದು ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದು ಉತ್ತಮ ಉದ್ಯೋಗಗಳನ್ನು ಪಡೆಯುತ್ತಿರುವದಕ್ಕೆ ಅವರನ್ನು ಅಭಿನಂದಿಸುತ್ತಾ ಪ್ರತಿಯೊಬ್ಬರೂ ಇತರರ ಜನ್ಮ ದಿನದಂದು ಕಾಣಿಕೆಗಳ ಬದಲಾಗಿ ಒಂದು ಪುಸ್ತಕವನ್ನು ಉಡುಗೊರೆಯಾಗಿ ನೀಡಲು ಮನವಿ ಮಾಡಿದರು.
ಮುಖ್ಯ ಅತಿಥಿಗಳಾದ ಕಿತ್ತೂರಿನ ಪ್ರಣವ ಯೋಗ ಕೇಂದ್ರದ ಸಂಚಾಲಕರಾದ ಶ್ರೀಮತಿ ಸೌಮ್ಯಾ
ರಾಘವೇಂದ್ರ ಮಾತನಾಡಿ ಕನ್ನಡವೇ ನಮ್ಮೆಲ್ಲರ ಉಸಿರಾಗಿದ್ದು ಕನ್ನಡ ಸಾಧಕರಿಗೆನೇ ಅತೀ ಹೆಚ್ಚು
ಅಂದರೆ ೮ ಜ್ಞಾನಪೀಠ ಪ್ರಶಸ್ತಿ ದೊರೆತಿರುವದಕ್ಕೆ ಸಂತಸ ವ್ಯಕ್ತ ಪಡಿಸುತ್ತ ನಮ್ಮ ಕೇಂದ್ರದ ಮಕ್ಕಳಿಗೆ
ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಲ್ಲಿ ಸಹಕರಿಸಿ ಅವರಿಗೆ ಅಭಿನಂದನಾ ಪತ್ರಗಳನ್ನು ನೀಡಿದ ಕನ್ನಡ ಸಾಹಿತ್ಯ ಪರಿಷತ್ತಿಗೆ ಧನ್ಯವಾದಗಳನ್ನು ತಿಳಿಸಿದರು. ಕಿತ್ತೂರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ವಿ.ಎಸ್. ನಂದೀಹಳ್ಳಿ ತಮ್ಮ ಆಶಯ ನುಡಿಗಳಲ್ಲಿ ೧೯೧೫ ರಲ್ಲಿ ಸ್ಥಾಪಿತವಾದ ಕನ್ನಡ ಸಾಹಿತ್ಯ ಪರಿಷತ್ತು ಹತ್ತು ಹಲವಾರು ಕನ್ನಡ ದಿಗ್ಗಜರ ನೇತೃತ್ವದಲ್ಲಿ ಇಂದಿನವರೆಗೂ ಉತ್ತಮಕಾರ್ಯ ನಿರ್ವಹಿಸುತ್ತ ಬಂದಿದ್ದು ಇನ್ನು ಮುಂದೆಯೂ ನಿರಂತರವಾಗಿ ಕ್ರಿಯಾಶೀಲವಾಗಲಿ ಎಂದು ಶುಭ ಕೋರುತ್ತ ೧ ರಿಂದ ೧೦೦ ರವರೆಗಿನ ಅಂಕಿಗಳನ್ನು ಪ್ರತಿಯೊಬ್ಬರೂ ಕನ್ನಡದಲ್ಲಿಯೂ ಬರೆಯುವ ರೂಢಿ ಮಾಡಿಕೊಳ್ಳಬೇಕೆಂದು ವಿನಂತಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕಿತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಡಾ.ಎಸ್.ಬಿ.ದಳವಾಯಿ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಶತಕವನ್ನು ಪೂರೈಸಿದ ಕನ್ನಡ ಸಾಹಿತ್ಯ ಪರಿಷತ್ತು ಡಾ.ನಾಡೋಜ ಮಹೇಶ ಜೋಷಿ ಇವರ ನೇತೃತ್ವದಲ್ಲಿ ಕನ್ನಡ ಭಾಷೆಯ ಅಸ್ಮಿತೆಯು ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ಮಂಗಲಾ ಮೆಟಗುಡ್ಡ ನಮಗೆಲ್ಲರಿಗೆ ಉತ್ತಮ ಮಾರ್ಗದರ್ಶನ ಮಾಡುತ್ತಿರುವರು. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕಾರ ನೀಡಿದ ಪತ್ರಕರ್ತ ಮಿತ್ರರಿಗೆ ಮತ್ತು ಎಲ್ಲ ಕನ್ನಡ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದರು.

ಪ್ರಣವ ಯೋಗ ಕೇಂದ್ರದ ಮಕ್ಕಳು ಪ್ರಾರ್ಥನೆ ಮಾಡುವದರ ಜೊತೆಗೆ ಕನ್ನಡ ಹಾಡುಗಳನ್ನು ಹಾಡಿ
ತಾವು ರಚಿಸಿದ ಚಿತ್ರಕಲೆಗಳನ್ನು ಪ್ರದರ್ಶಿಸಿದರು. ಈ ಮಕ್ಕಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ
ಅಭಿನಂದನಾ ಪತ್ರಗಳನ್ನು ವಿತರಿಸಿ ಗೌರವಾನ್ವಿತ ಅತಿಥಿಗಳನ್ನು ಸನ್ಮಾನಿಸಲಾಯಿತು.
ಪ್ರಾರಂಭದಲ್ಲಿ ತಾಯಿ ಭುವನೇಶ್ವರಿ ಭಾವ ಚಿತ್ರಕ್ಕೆ ಪೂಜೆ ಮಾಡಿ ಗೌರವ ಸಲ್ಲಿಸುವದರ ಮೂಲಕ
ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಂಬಿಕಾ ಪೂಜೇರ ಮತ್ತು ಸಂಗಡಿಗರು ನಾಡಗೀತೆ
ಹಾಡಿದರು. ಸುನಂದಾ ಜೋಶಿ ಸ್ವಾಗತಿಸಿದರು. ಪ್ರಕಾಶ ಹೊನ್ನಪ್ಪನವರ ಅತಿಥಿಗಳನ್ನು ಪರಿಚಯಿಸಿದರು.

ಶೋಭಾ ಪಾಶ್ಚಾಪೂರ ವಂದಿಸಿದರು. ಪ್ರಭಾ ಲದ್ದೀಮಠ ನಿರೂಪಿಸಿದರು. ಕಾರ್ಯಕ್ರಮದಲ್ಲಿ
ರಾಘವೇಂದ್ರ,ಮಹೇಶ್ವರ ಹೊಂಗಲ, ಮಹಾದೇವ ಕಡಬಿ , ಶ್ರೀಮತಿ ಎಂ.ಜಿ.ಪಾಟೀಲ, ಪತ್ರಕರ್ತರು,
ಕನ್ನಡ ಸಾಹಿತ್ಯ ಪರಿಷತ್ತಿನ ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.


Post a Comment

0 Comments